ADVERTISEMENT

ಕಾಳಗಿ | ತಳವಾರ ಎಸ್.ಟಿ ಜಾತಿ ಪ್ರಮಾಣ ಪತ್ರ ರದ್ದು: ಪ್ರತಿಭಟನೆ

ಕಾಳಗಿ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:57 IST
Last Updated 9 ಆಗಸ್ಟ್ 2025, 6:57 IST
ಕಾಳಗಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು
ಕಾಳಗಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು   

ಕಾಳಗಿ: ಆ.17ರಂದು ನಡೆಯಲಿರುವ ಕಾಳಗಿ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ವಾರ್ಡ್ ನಂ.4 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ ತಳವಾರ ಜಾತಿ ಅಭ್ಯರ್ಥಿಗಳ ಎಸ್.ಟಿ ಪ್ರಮಾಣ ಪತ್ರ ಏಕಾಏಕಿ ರದ್ದುಗೊಳಿಸಿದನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ರಾಜ್ಯ ತಳವಾರ ಮಹಾಸಭಾ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕಲಬುರಗಿ-ಚಿಂಚೋಳಿ ಮುಖ್ಯರಸ್ತೆಯಲ್ಲಿ ಪ್ರತಿಭಟಿಸಿ ಸರ್ಕಾರ ಮತ್ತು ಅಧಿಕಾರಿಗಳ ಧೋರಣೆಯನ್ನು ವಿರೋಧಿಸಿದರು.

‘ತಳವಾರ ಜನಾಂಗದ ಅಂಬವ್ವ ಕಾಳಪ್ಪ ರಾಜಾಪುರ ಮತ್ತು ಸಂತೋಷ ಸೇನಾಪತಿ ಕಡಬೂರ ಅವರು ಕಾಳಗಿ ತಹಶೀಲ್ದಾರಿಂದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದು, ಪ್ರಸ್ತುತ ಚುನಾವಣೆಯಲ್ಲಿ ತಲಾ ಒಂದೊಂದು ರಾಜಕೀಯ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ ಕೆಲ ರಾಜಕೀಯ ದುಷ್ಟಶಕ್ತಿಗಳ ಒತ್ತಡಕ್ಕೆ ಮಣಿದು, ಅದೇ ತಹಶೀಲ್ದಾರ್‌ರು ಎಸ್.ಟಿ ಜಾತಿ ಪ್ರಮಾಣ ಪತ್ರವನ್ನು ಹಿಂಪಡೆದು ರದ್ದುಗೊಳಿಸಿದ್ದಾರೆ. ಅಧಿಕಾರಿಗಳ ಈ ನಡೆ ಕಾನೂನು ಬಾಹಿರವಾಗಿದ್ದು ಕೂಡಲೇ ಅವರು ಮರು ಆದೇಶ ಮಾಡಿ ಸ್ಪರ್ಧೆಗೆ ಮಾನ್ಯತೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಒಂದು ವೇಳೆ ಈ ಕ್ರಮಕ್ಕೆ ಮುಂದಾಗದಿದ್ದಲ್ಲಿ ಆ ವಾರ್ಡಿನ ಚುನಾವಣೆಯನ್ನು ತಡೆಹಿಡಿದು ಸಮಸ್ಯೆ ಇತ್ಯರ್ಥವಾದ ಮೇಲೆ ಚುನಾವಣೆ ನಡೆಸಬೇಕು. ಅಧಿಕಾರಿಗಳು ಯಾವುದಕ್ಕೂ ಕ್ರಮ ಕೈಗೊಳ್ಳದಿದ್ದರೆ ತಮ್ಮ ವಿರುದ್ಧವೇ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮುಖಂಡರಾದ ಶರಣಪ್ಪ ತಳವಾರ, ಶೋಭಾ ಬಾಣಿ, ಲಚ್ಚಪ್ಪ ಜಮಾದಾರ, ಅವ್ವಣ್ಣ ಮ್ಯಾಕೇರಿ, ರವಿರಾಜ ಕೊರವಿ, ಲಕ್ಷ್ಮಣ ಅವುಂಟಿ, ಮಲ್ಲಿಕಾರ್ಜುನ ಎಮ್ಮೆನೋರ, ರಾಮಲಿಂಗ ನಾಟೀಕಾರ, ಪೃಥ್ವಿರಾಜ ನಾಮದಾರ, ರೇವಣಸಿದ್ದಪ್ಪ ಚೇಂಗಟಾ, ಶಿವಕುಮಾರ ಕಮಕನೂರ, ಸಿದ್ದು ಕೇಶ್ವಾರ, ಶಿವು ಚಿಕ್ಕ ಅಗಸಿ, ತುಳಜಪ್ಪ ಮಂತಟ್ಟಿ ಅನೇಕರು ಇದ್ದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಮನವಿ ಪತ್ರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.