ADVERTISEMENT

ಎಸ್‌ಟಿಗಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿ: ಅವ್ವಣ್ಣ ಮ್ಯಾಕೇರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:16 IST
Last Updated 3 ಜನವರಿ 2026, 6:16 IST
ಅವ್ವಣ್ಣ ಮ್ಯಾಕೇರಿ
ಅವ್ವಣ್ಣ ಮ್ಯಾಕೇರಿ   

ಕಲಬುರಗಿ: ‘ಕೋಲಿ–ಕಬ್ಬಲಿಗ ಮತ್ತು ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ನೇತೃತ್ವದಲ್ಲಿ ಅಧಿಕೃತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮೊದಲು ಪ್ರಸ್ತಾವ ಸಲ್ಲಿಸಬೇಕು. ಬಳಿಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಕೋಲಿ–ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಸಮನ್ವಯ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಂಗಾಮತ ಸುಸಂಸ್ಕೃತ ಪದವಾಗಿದ್ದು, ಇದರ ಅಡಿಯಲ್ಲಿ ಯಾವ ಪದಗಳನ್ನು ಎಸ್.ಟಿ.ಗೆ ಸೇರಿಸಲು ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾವವನ್ನು 2023ರ ಡಿ.5ಕ್ಕೆ ವಾಪಸ್‌ ಕಳುಹಿಸಿದೆ. ಬಳಿಕ 2024ರ ಫೆಬ್ರುವರಿಯಲ್ಲಿ ಸಮಾಜದ ರಾಜ್ಯ ಸಂಘ ಬೆಂಗಳೂರಿನಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಮಾಡಿ ಬುಡಕಟ್ಟು ಲಕ್ಷಣವುಳ್ಳ ಪದಗಳನ್ನು ಸೇರ್ಪಡೆ ಮಾಡುವಂತೆ ಹೊಸ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು’ ಎಂದರು.

‘ನಂತರ ರಾಜ್ಯ ಸಂಘ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಹೊಸ ಸಂಘದ ಹೆಸರಿನಲ್ಲಿ 2024ರ ಮಾ.27ರಂದು ಅರ್ಜಿ ಸಲ್ಲಿಸಲಾಯಿತು. ಆದರೆ, ಈ ಸಂಘ ನೋಂದಾಯಿತವಲ್ಲದ ಕಾರಣ ಮಾನ್ಯವಾಗಲಿಲ್ಲ. ಈಗ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಮುಖಂಡರು ಅಧಿಕೃತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಸೂಕ್ತ ಮನವಿ ಸಲ್ಲಿಸಬೇಕಿದೆ. ಆದರೆ, ಈ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಮನವಿ ಸಲ್ಲಿಸುವುದು ಬಿಟ್ಟು ಎಂಎಲ್ಸಿಗಳಾದ ಎನ್‌.ರವಿಕುಮಾರ, ಸಾಬಣ್ಣ ತಳವಾರ, ಮುಖಂಡರಾದ ಶಿವಕುಮಾರ ನಾಟೀಕಾರ, ಶೋಭಾ ಬಾಣಿ ಅವರು ಸಮಾಜದ ಮುಗ್ಧ ಜನರೊಂದಿಗೆ ಹೋರಾಟ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ದಾಖಲಾತಿಗಳನ್ನು ಆಧರಿಸಿ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಡಿ.24ರಂದು ಆದೇಶ ಮಾಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸರಳವಾಗಿ ಎಸ್.ಟಿ. ಪ್ರಮಾಣಪತ್ರ ನೀಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಸಾಯಬಣ್ಣ ನೀಲಪ್ಪಗೋಳ, ಬಸವರಾಜ ಬೂದಿಹಾಳ, ರಮೇಶ ನಾಟೀಕಾರ, ಗುಂಡು ಐನಾಪುರ, ತಮ್ಮಣ್ಣ ಡಿಗ್ಗಿ, ಬಸವರಾಜ ಗುಂಡಲಗೇರಿ, ಮಹಾದೇವ ಕೋಲಿ, ಈರಣ್ಣ ಹೊಸ್ಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.