ADVERTISEMENT

ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಪರಿಶಿಷ್ಟ ಪಂಗಡ ಸೇರ್ಪಡೆಗಾಗಿ ನಡೆದ ಹೋರಾಟದಲ್ಲಿ ವಿವಿಧ ಜಿಲ್ಲೆಗಳ ಸಾವಿರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 19:12 IST
Last Updated 29 ಡಿಸೆಂಬರ್ 2025, 19:12 IST
ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಕೋಲಿ–ಕಬ್ಬಲಿಗ ಸಮಾಜದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಲಬುರಗಿಯ ಜಗತ್‌ ವೃತ್ತದಲ್ಲಿ ಸೋಮವಾರ ಸೇರಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರಗಳು
ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಕೋಲಿ–ಕಬ್ಬಲಿಗ ಸಮಾಜದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಲಬುರಗಿಯ ಜಗತ್‌ ವೃತ್ತದಲ್ಲಿ ಸೋಮವಾರ ಸೇರಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರಗಳು   

ಕಲಬುರಗಿ: ಒಂದಿಷ್ಟು ಮಂದಿ ಅಂಬಿಗರ ಚೌಡಯ್ಯ ಪರ ಘೋಷಣೆ ಮೊಳಗಿಸಿದರು. ಇನ್ನೊಂದಿಷ್ಟು ಮಂದಿ ಹಿಂದಿನ ಸರ್ಕಾರಗಳನ್ನು ದೂಷಿಸಿದರು. ಮತ್ತೆ ಕೆಲವರು ಮಾತು ಮಾತಿಗೂ ವಿಠಲ ಹೇರೂರರ ಸ್ಮರಣೆಗೈದರು. ನಿಜಶರಣ ಅಂಬಿಗರ ಚೌಡಯ್ಯರ ಚಿತ್ರವುಳ್ಳ ಕೇಸರಿ ಬಾವುಟಗಳ ಬೀಸಾಟ ಜೋರಾಗಿತ್ತು. ನೆತ್ತಿಸುಡುವ ಬಿಸಿಲಿನಲ್ಲೂ ಸೇರಿದ್ದ ಸಾವಿರಾರು ಜನರ ತಲೆಗಳ ಮೇಲೂ ‘ಜೈ ಅಂಬಿಗ, ಜೈ ಕೋಲಿ’ ಬರೆದ ಟೊಪ್ಪಿಗೆ ನೆರಳಿತ್ತು...

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರಿಕ್ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮವಹಿಸುವಂತೆ ಆಗ್ರಹಿಸಿ  ಕೋಲಿ, ಕಬ್ಬಲಿಗ ಸಮುದಾ ಯದಿಂದ  ನಗರದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಪಕ್ಷಾತೀತ ಪ್ರತಿಭಟನೆಯಲ್ಲಿ ಕಂಡ ನೋಟವಿದು.

ನಗರದ ಜಗತ್ ವೃತ್ತದಲ್ಲಿ ಬೆಳಿಗ್ಗೆ 10.30ರಿಂದಲೇ ಜಿಲ್ಲೆಯೂ ಸೇರಿದಂತೆ ನೆರೆಯ ಜಿಲ್ಲೆಗಳ ಸಾವಿರಾರು ಮಂದಿ ತೊರೆಗಳಂತೆ ಹರಿದು ಬಂದು ‘ಪ್ರತಿಭಟನಕಾರರ ಸಾಗರ’ ಸೇರಿದರು. ಹೊತ್ತು ತಿರುಗಿದಂತೆ ಜಗತ್ ವೃತ್ತ ಸಂಪೂರ್ಣವಾಗಿ ಪ್ರತಿಭಟನಕಾರರಿಂದ ತುಂಬಿ ತುಳುಕಿತು.

ADVERTISEMENT

ಮಧ್ಯಾಹ್ನ 1.30ರ ಹೊತ್ತಿಗೆ ಗಣ್ಯರು ಡಾ.ಅಂಬೇಡ್ಕರ್ ಮೂರ್ತಿ ಹಾಗೂ ಬಸವೇಶ್ವರ ಪ್ರತಿಮೆಗೆ ಪುಷ್ಪಹಾರ ಹಾಕಿ, ಅಂಬಿಗರ‌ ಚೌಡಯ್ಯ ಇರುವ ಚಿತ್ರದ ಬಾವುಟ ಬೀಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ‌ ನೀಡಿದರು. ಬಳಿಕ ಪ್ರತಿಭಟನಾ ಜಾಥಾ ಅನ್ನಪೂರ್ಣ ಕ್ರಾಸ್‌, ಲಾಹೋಟಿ ಪೆಟ್ರೋಲ್‌ ಬಂಕ್‌ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಜಿಲ್ಲಾಧಿಕಾರಿ ಕಚೇರಿ ಎದುರು ವಾಹನಗಳ ಸಂಚಾರ ಸ್ತಬ್ಧಗೊಳಿಸಿ ಬಿಸಿಲಿನಲ್ಲೇ ರಸ್ತೆಯಲ್ಲಿ ಠಿಕಾಣಿ ಹೂಡಿದರು. ಹತ್ತಾರು ಮುಖಂಡರು ಐದು ಗಂಟೆಗಳಿಗೂ ಅಧಿಕ ಕಾಲ ಮಾತನಾಡುತ್ತಲೇ
ಹೋದರು.

ಹಲವರು ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ‘ಪ್ರಸಕ್ತ ಹೋರಾಟವನ್ನು ದಾರಿ ತಪ್ಪಿಸಲು ಕೆಲವು ನಾಯಕರು ಯತ್ನಿಸಿದ್ದಾರೆ’ ಎಂದು ತಮ್ಮದೇ ಸಮುದಾಯದ ನಾಯಕರ ವಿರುದ್ಧವೂ ಕಠಿಣ ಪದಗಳಲ್ಲಿ ಟೀಕಿಸಿದರು.

‘ಖರ್ಗೆ ಕುಟುಂಬ ನಮ್ಮ ಮತಗಳನ್ನು ಪಡೆದು ದಶಕಗಳಿಂದ ಅಧಿಕಾರ ಅನುಭವಿಸುತ್ತಲೇ ಇದೆ. ಈ ತನಕ ನಮ್ಮ ಎಸ್ಟಿ ಸೇರ್ಪಡೆ ಕುರಿತು ಕನಿಷ್ಠ ಒಮ್ಮೆಯೂ ವಿಧಾನಸಭೆಯಲ್ಲಾಗಲಿ, ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಈಗಲೂ ಎಸ್ಟಿ ಸೇರ್ಪಡೆಗೆ ಕ್ರಮವಹಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸೋಣ’ ಎಂದು ಮುಖಂಡೆ ಶೋಭಾ ಬಾನಿ ಗುಡುಗಿದರು.

ಊಟ, ನೀರಿನ ವ್ಯವಸ್ಥೆ:  ಮಧ್ಯಾಹ್ನದ ಬಿರು ಬಿಸಿನಲ್ಲಿ ಸಾಗಿ ಬಂದ ಪ್ರತಿಭಟನಕಾರರಿಗೆ ಮಾರ್ಗದ ಅಲ್ಲಲ್ಲಿ ಊಟದ ಪ್ಯಾಕೇಟ್‌ ಹಾಗೂ ನೀರಿನ ಪ್ಯಾಕೆಟ್ ವಿತರಿಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಅವುಗಳಿಂದ ಹಸಿವು, ದಾಹ ನೀಗಿಸಿಕೊಂಡರು.

ರಾತ್ರಿ ತನಕ ಕದಲದ ಜನ: ಜಿಲ್ಲಾಧಿಕಾರಿ ಕಚೇರಿ ಎದುರು ಪುಟಾಣಿ ವೇದಿಕೆಯಲ್ಲಿ ಎರಡು ಕುರ್ಚಿ ಹಾಕಲಾಗಿತ್ತು. ಅಲ್ಲಿ ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ ಹಾಗೂ ಹಾವೇರಿಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಆಸೀನರಾದರು. 

ಇನ್ನುಳಿದಂತೆ ವಿಧಾನ ಪರಿಷತ್ ಸದಸ್ಯರಾದ ಎನ್‌.ರವಿಕುಮಾರ್‌ ಹಾಗೂ ಸಾಬಣ್ಣ ತಳವಾರ ಆದಿಯಾಗಿ ಎಲ್ಲರೂ ನೆಲದ ಮೇಲೆ ಕುಳಿತಿದ್ದು ವಿಶೇಷವಾಗಿತ್ತು.  ಮುಖಂಡರಾದ ತಿಪ್ಪಣ್ಣ ರೆಡ್ಡಿ, ಶರಣಪ್ಪ ತಳವಾರ, ಮಲ್ಲಿಕಾ ರ್ಜುನ ಎಮ್ಮೇನೋರ್, ಅಯ್ಯಣ್ಣ, ರಾಜು ಜೈನಾಪುರ, ಸುನೀತಾ ತಳವಾರ, ಭಗವಂತ್ರಾಯ ಬೆನ್ನೂರ, ಶಿವಾಜಿ ಮೆಟಗಾರ, ವಿದ್ಯಾಧರ ಮಂಗಳೂರೆ, ದಿಗಂಬರ ಕರಜಗಿ ಸೇರಿದಂತೆ ಹತ್ತಾರು ಮಂದಿ ಮಾತನಾಡಿದರು. ರಾತ್ರಿ 9.15ರ ತನಕ ನೂರಾರು ಮಂದಿ ಹೋರಾಟದ ಸ್ಥಳ ಬಿಟ್ಟು ಕದಲಲಿಲ್ಲ.

ಅಧಿಕಾರಿಗಳ ಮೂರ್ನಾಲ್ಕು ಸುತ್ತಿನ ಮನವೊಲಿಕೆಗೂ ಪ್ರತಿಭಟನಕಾರರು ಜಗ್ಗಲಿಲ್ಲ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹಾವೇರಿಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರೊಂದಿಗೆ ಮಾತನಾಡಿ ಸ್ಪಂದಿಸುವ ಭರವಸೆ ನೀಡಿದರು. ಆ ಭರವಸೆಯೊಂದಿಗೆ ಪ್ರತಿಭಟನಕಾರರು ಧರಣಿ ಕೈಬಿಟ್ಟರು. ಈ ಪ್ರತಿಭಟನೆ ಅಂಗವಾಗಿ ನಗರದ‌ ಹಲವು ರಸ್ತೆಗಳಲ್ಲಿ ಪೊಲೀಸರು ಮೊದಲೇ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ‌ಮಾಡಿದ್ದರು. ಪ್ರತಿಭಟನೆಯ ವೇಳೆ ಮಧ್ಯಾಹ್ನ ಬಂದ್‌ ಆಂಬುಲೆನ್ಸ್‌ವೊಂದಕ್ಕೆ ಪ್ರತಿಭಟನಕಾರರು ಸುಗಮವಾಗಿ ದಾರಿಬಿಟ್ಟರು. ರಾತ್ರಿ ಬಂದ ಆಂಬುಲೆನ್ಸ್‌ಗೂ ದಾರಿ ಮಾಡಿಕೊಟ್ಟರೂ, ಬಳಿಕ ‘ಅದರಲ್ಲಿ ರೋಗಿಯೇ ಇಲ್ಲ’ ಎಂದು ಉದ್ರಿಕ್ತ ಯುವಕರು ಅದರ ಗಾಜು ಒಡೆದ ಘಟನೆ ನಡೆಯಿತು.

ಸೋಮವಾರ ರಾತ್ರಿ 9.30ರ ಹೊತ್ತಿಗೆ ಪ್ರತಿಭಟನೆ ಮುಗಿದ ಬಳಿಕ ಮನೆಗಳತ್ತ ಹೊರಡಲು ಸಜ್ಜಾದ ಜನ...
ಕೋಲಿ ಸಮಾಜ ಇತಿಹಾಸ ಸೃಷ್ಟಿಗೆ ಹುಟ್ಟಿದ ಸಮಾಜ. ಅದು ಹುಟ್ಟಿದ್ದೇ ಆಡಳಿತ ನಡೆಸಲು ಗುಲಾಮಗಿರಿ ಮಾಡುವುದಕ್ಕಾಗಿ ಅಲ್ಲ. ಎದುರು ಹಾಕಿಕೊಂಡರೆ ಸರ್ಕಾರ ದೂಳೀಪಟವಾಗುತ್ತದೆ.
ಮಲ್ಲಣ್ಣಪ್ಪ ಸ್ವಾಮೀಜಿ ತೊನಸನಳ್ಳಿ ಮಠ
ಎಸ್ಟಿ ಸೇರ್ಪಡೆಯ ಫೈಲ್‌ 30 ವರ್ಷದಲ್ಲಿ 11 ಸಲ ಫೈಲ್‌ ಕೇಂದ್ರ–ರಾಜ್ಯದ ನಡುವೆ ಓಡಾಡಿದೆ. 2 ವರ್ಷದ ಹಿಂದೆ ರಾಜ್ಯಕ್ಕೆ ವಾಪಸ್‌ ಬಂದು ಐಸಿಯು ಸೇರಿದೆ. ಅದನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿ ಸರ್ಕಾರ ಕಳುಹಿಸಬೇಕಿದೆ
ಸಾಬಣ್ಣ ತಳವಾರ ವಿಧಾನ ಪರಿಷತ್ ಸದಸ್ಯ

‘ಪಾದಯಾತ್ರೆಗೂ ಸೈ ಉಪವಾಸಕ್ಕೂ ಸೈ

’ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನದಂತೆ ನಮ್ಮ ಸಮುದಾಯಕ್ಕೆ ಎಂದೋ ಎಸ್ಟಿ ಮೀಸಲಾತಿ ಸಿಗಬೇಕಿತ್ತು. ಆದರೆ ಇಂದಿಗೂ ಅದರಿಂದ ವಂಚಿತವಾಗಿದೆ. ನನ್ನ ಸಮಾಜ ಶೈಕ್ಷಣಿಕ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದೆ. ಅದಕ್ಕೆ ಧ್ವನಿ ಇಲ್ಲ. ಎಸ್ಟಿ ಸೇರ್ಪಡೆಯ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪಾದಯಾತ್ರೆ ನಡೆಸಲೂ ಸಿದ್ಧ. ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಆಮರಣಾಂತ ಉಪವಾಸಕ್ಕೂ ಸೈ’ ಎಂದು ಹೋರಾಟದ ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ರಸ್ತೆ ಬಂದ್‌; ಜನರ ಪರದಾಟ

ಪ್ರತಿಭಟನೆಗೂ ಮುನ್ನ ಜಗತ್ ವೃತ್ತದಲ್ಲಿ ವಾಹನಗಳ ಸಂಚಾರ ಸ್ತಬ್ಧಗೊಂಡಿತು. ಇದರಿಂದ ಎಸ್‌ವಿಪಿ ವೃತ್ತ ಹಾಗೂ ಗೋವಾ ವೃತ್ತದ ಕಡೆಯಿಂದ ದರ್ಗಾ ಮಾರ್ಗ ಸೂಪರ್‌ ಮಾರ್ಕೆಟ್‌ ಮಾರ್ಗದತ್ತ ಸಾಗುವ ವಾಹನಗಳ ಸವಾರರು ಪರದಾಡಿದರು. ಜಾಥಾ ವೇಳೆ ಜಗತ್‌ ವೃತ್ತದಿಂದ ಎಸ್‌ವಿಪಿ ತನಕ ಎರಡೂ ಬದಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಎದುರೇ ಏಳು ಗಂಟೆಗಳಷ್ಟು ಹೊತ್ತು ಪ್ರತಿಭಟನೆ ನಡೆದಿದ್ದರಿಂದ ನಾಗರಿಕರು ವಾಹನಗಳ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.