ADVERTISEMENT

ಸಿಬ್ಬಂದಿ, ಕೊಠಡಿ ಕೊರತೆ; ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಬೇಕಿದೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:54 IST
Last Updated 20 ಫೆಬ್ರುವರಿ 2026, 5:54 IST
ಕಲಬುರಗಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿ ಉಪನ್ಯಾಸ ಆಲಿಸುತ್ತಿರುವ ವಿದ್ಯಾರ್ಥಿಗಳು
ಕಲಬುರಗಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿ ಉಪನ್ಯಾಸ ಆಲಿಸುತ್ತಿರುವ ವಿದ್ಯಾರ್ಥಿಗಳು   

ಕಲಬುರಗಿ: ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರವಿರುವ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯು (ಜೆಟಿಎಸ್) ಕೊಠಡಿ ಮತ್ತು ಸಿಬ್ಬಂದಿಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಅಲ್ಲದೆ ಲಭ್ಯವಿರುವ ಕೊಠಡಿಗಳ ಚಾವಣಿ ಪದರು ಕುಸಿಯುತ್ತಿರುವುದರಿಂದ ವಿದ್ಯಾರ್ಥಿಗಳು ಆತಂಕದಲ್ಲಿಯೇ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ನೀಡಲು ಸರ್ಕಾರದಿಂದ 1964ರಲ್ಲಿ ವಿಶೇಷವಾಗಿ ಸ್ಥಾಪಿತವಾದ ಶಾಲೆ ಇದಾಗಿದೆ. ಪ್ರಸ್ತುತ 8ರಿಂದ 10ನೇ ತರಗತಿವರೆಗೆ ಒಟ್ಟು 128 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಶಾಲೆಗೆ ಮಂಜೂರಾದ 35 ಹುದ್ದೆಗಳ ಪೈಕಿ 26 ಹುದ್ದೆಗಳು ಖಾಲಿ ಇವೆ.

ಇಲ್ಲಿನ ವಿದ್ಯಾರ್ಥಿಗಳು ಇತರೆ ಶಾಲೆಗಳ ವಿದ್ಯಾರ್ಥಿಗಳಂತೆ ಆರು ವಿಷಯಗಳನ್ನು ಕಲಿಯುವುದರ ಜೊತೆಯಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ವಿಷಯಗಳನ್ನು ಹೆಚ್ಚುವರಿಯಾಗಿ ಅಧ್ಯಯನ ಮಾಡುತ್ತಾರೆ. ಹೀಗಾಗಿ ಈ ವಿಷಯಗಳು ಮತ್ತು ಇವುಗಳ ಪ್ರಾಯೋಗಿಕ ಶಿಕ್ಷಣಕ್ಕಾಗಿ ಒಟ್ಟು 15 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಕೇವಲ ನಾಲ್ಕು ಹುದ್ದೆಗಳು ಭರ್ತಿಯಾಗಿದ್ದು ಇನ್ನುಳಿದ 11 ಹುದ್ದೆಗಳು ಖಾಲಿ ಇವೆ. ಪ್ರಮುಖವಾಗಿ ಮೆಕ್ಯಾನಿಕಲ್ ವಿಷಯದ ಉಪನ್ಯಾಸಕ, ಸಹ ಬೋಧಕ ಮತ್ತು ಪ್ರಯೋಗಾಲಯದಲ್ಲಿನ ಜೋಡಣೆ (ವೆಲ್ಡಿಂಗ್), ಬಡಿಗತನ (ಕಾರ್ಪೆಂಟರಿ), ಸಹಾಯಕ ಮೆಕ್ಯಾನಿಕಲ್‌ಗಳ ಹುದ್ದೆಗಳು ಖಾಲಿ ಇವೆ. ಇದರೊಟ್ಟಿಗೆ ಎಲೆಕ್ಟ್ರಿಕಲ್ ವಿಷಯದಲ್ಲಿ ಸಹ ಉಪನ್ಯಾಸಕ ಹುದ್ದೆ ಹೊರತುಪಡಿಸಿ ಇನ್ನೆಲ್ಲಾ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹಿನ್ನೆಡೆಯಾಗುತ್ತಿದೆ.

ADVERTISEMENT

ಕೊಠಡಿ ಕೊರತೆ, ಆತಂಕದಲ್ಲಿ ವಿದ್ಯಾರ್ಥಿಗಳು: ಪ್ರಸ್ತುತ ತಾಂತ್ರಿಕ ಶಿಕ್ಷಣ ಇಲಾಖೆ ಅಡಿ ಇರುವ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಕಟ್ಟಡವು 1964ರಲ್ಲಿ ನಿರ್ಮಿಸಲಾಗಿದ್ದು, ವಿಶಾಲವಾದ ಮೈದಾನ ಮತ್ತು ಸಾಕಷ್ಟು ಕೊಠಡಿಗಳನ್ನು ಹೊಂದಿದೆ. ಆದರೆ, ಪಕ್ಕದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಹ ತಾಂತ್ರಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಶಾಲೆಯ ಹಲವು ಕೊಠಡಿಗಳನ್ನು ಮಹಿಳಾ ಪಾಲಿಟೆಕ್ನಿಕ್ ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ಜೆಟಿಎಸ್ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಉಂಟಾಗಿದೆ.

‘ಉಳಿದ ಕೊಠಡಿಗಳ ಪೈಕಿ ಒಂದು ಕೊಠಡಿಯ ಚಾವಣಿ ಪದರು ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುವ ಕಾರಣದಿಂದ ಬಂದ್ ಮಾಡಲಾಗಿದೆ. ಇನ್ನುಳಿದ ಕೊಠಡಿಗಳಲ್ಲಿಯು ಸಹ ಚಾವಣಿ ಪದರು ಅಲ್ಪ ಪ್ರಮಾಣದಲ್ಲಿ ಕುಸಿದಿದ್ದರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದೇ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಾಲಾ ಸಿಬ್ಬಂದಿ.

ಕೆಟ್ಟು ನಿಂತ ಯಂತ್ರೋಪಕರಣ: ‘ಮಕ್ಕಳಲ್ಲಿ ತಾಂತ್ರಿಕ ವಿಷಯಗಳ ಬೋಧನೆ ಮತ್ತು ಜೊತೆಗೆ ಪ್ರಾಯೋಗಿಕ ಶಿಕ್ಷಣದ ಮೂಲಕ ಕೌಶಲ ಹೆಚ್ಚಿಸುವುದು ಜೆಟಿಎಸ್‌ಗಳ ಮೂಲ ಉದ್ದೇಶವಾಗಿದೆ. ಆದರೆ, ಇಲ್ಲಿನ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಪ್ರಯೋಗಾಲಯದಲ್ಲಿನ ಬಹುತೇಕ ಯಂತ್ರೋಪಕರಣಗಳು ಕಾರ್ಯನಿರ್ವಹಿಸದೆ ನಿಂತು ಹಲವಾರು ವರ್ಷಗಳು ಗತಿಸಿವೆ. ಇನ್ನು ಲಭ್ಯವಿರುವ ಕೆಲವು ಮಷೀನ್‌ಗಳು ತುಂಬಾ ಹಳೆಯದಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಬಹು ದೂರದಲ್ಲಿವೆ’ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಕಿರಣ್‌ಕುಮಾರ್.

ಕ್ವೆಸ್ಟ್ ಗ್ಲೋಬಲ್ ಮತ್ತು ಉತಿಷ್ಠ ಎನ್‌ಜಿಒಗಳಿಂದ ಬಲ: ‘ಅವನತಿ ಹಂತದಲ್ಲಿಂದ ಕಲಬುರಗಿ ಜೆಟಿಎಸ್‌ ಸೇರಿದಂತೆ ರಾಜ್ಯದ ಆರೂ ಜೆಟಿಎಸ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕ್ವೆಸ್‌ ಗ್ಲೋಬಲ್‌ ಮತ್ತು ಉತಿಷ್ಠ ಎನ್‌ಜಿಒಗಳು ಮಾಡುತ್ತಿವೆ. ಶಾಲೆಯ ಎಲ್ಲ ವಿದ್ಯಾರ್ಥಿಗಳ ಶುಲ್ಕ ಭರಿಸಿದೆ. ಕಟ್ಟಡಕ್ಕೆ ಸುಣ್ಣ ಬಣ್ಣ, 15 ಕಂಪ್ಯೂಟರ್‌ ಸೇರಿದಂತೆ ಅಗತ್ಯವಿರುವ ಪಿಠೋಪಕರಣಗಳನ್ನು ಒದಗಿಸಿದೆ’ ಎಂದು ಪ್ರಭಾರ ಪ್ರಾಂಶುಪಾಲ ಗಿರಿಮಲ್ಲ ಕೆ. ತಿಳಿಸಿದರು.

ಕಲಬುರಗಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿನ ಎಲೆಕ್ಟ್ರಿಕಲ್ ವಿಭಾಗದ ಪ್ರಯೋಗಾಲಯದಲ್ಲಿನ ಉಪಕರಣ ಹಾಳಾಗಿರುವುದು
ಕಲಬುರಗಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಕಟ್ಟದ ಚಾವಣಿ ಪದರು ಕಿತ್ತುಬಿದ್ದಿರುವುದು
ಜೆಟಿಎಸ್‌ ಕಟ್ಟಡ ತುಂಬಾ ಹಳೆಯದಾಗಿದೆ. ಹೀಗಾಗಿ ಕೂಡಲೇ ಸರ್ಕಾರ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು
ಮಂಜುನಾಥ ಕೊಣ್ಣೂರ ಎಬಿವಿಪಿ ಜಿಲ್ಲಾ ಸಂಚಾಲಕ
ಜೆಟಿಎಸ್‌ಗಳು ಕೆಲವೇ ದಿನಗಳ ಹಿಂದೆ ನಮ್ಮ ಇಲಾಖೆಗೆ ವರ್ಗಾವಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪರಿಶೀಲಿಸಲಾಗುವುದು
ಸುರೇಶ್‌ ಡಿ.ಸಿ. ಶಾಖಾಧಿಕಾರಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು

ಶಾಲೆ ಉಳಿಸಲು ಶಿಕ್ಷಕರ ಕಸರತ್ತು

‘ಪ್ರತಿ ತರಗತಿಗೆ 60 ವಿದ್ಯಾರ್ಥಿಗಳು ದಾಖಲಾತಿ ಪಡೆಯಬಹುದು. ಆದರೆ ಹಲವು ಕಾರಣಗಳಿಂದ ಕೆಲವು ವರ್ಷಗಳ ಕೆಳಗಡೆ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿದು ಪ್ರತಿ ತರಗತಿಗೆ ಸರಿ ಸುಮಾರು 18ರಿಂದ 20 ವಿದ್ಯಾರ್ಥಿಗಳು ಮಾತ್ರ ಇರುತ್ತಿದ್ದರು. ಹೀಗಾಗಿ ಶಾಲೆಯ ಸಿಬ್ಬಂದಿಯೇ ಸ್ವಂತ ದುಡ್ಡಿನಲ್ಲಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಜೆಟಿಎಸ್‌ ಅನುಕೂಲತೆ ಕುರಿತು ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ್ದೆವು. ಇದರ ಪರಿಣಾಮ ಪ್ರಸ್ತುತ 2 ವರ್ಷಗಳಿಂದ ಪೂರ್ಣ ಪ್ರಮಾಣದ ಸೀಟು ಭರ್ತಿಯಾಗುತ್ತಿವೆ’ ಎಂದು ಪ್ರಭಾರ ಪ್ರಾಂಶುಪಾಲ ಗಿರಿಮಲ್ಲ ಕೆ. ಹೇಳುತ್ತಾರೆ. ‘ರಾಜ್ಯದಲ್ಲಿ ಕೇವಲ 6 ಜೆಟಿಎಸ್‌ಗಳಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಭಾರಿ ಬೇಡಿಕೆ ಇದೆ. ಅಲ್ಲದೆ ಎಲ್ಲ ಪಾಲಿಟೆಕ್ನಿಕ್‌ ಜಿಟಿಟಿಸಿ ಕೆಜಿಟಿಟಿಐ ಗಳಲ್ಲಿ 10 ಸೀಟ್‌ಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಾಯ್ದಿರಿಸಲಾಗಿರುತ್ತದೆ’ ಎಂದು ಮಾಹಿತಿ ನೀಡಿದರು.

ಇಲಾಖೆ ಬದಲಾವಣೆ: ಹೆಚ್ಚಿದ ನಿರೀಕ್ಷೆ 

ಈವರೆಗೆ ಕಿರಿಯ ತಾಂತ್ರಿಕ ಶಾಲೆಗಳು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇತ್ತಿಚಿಗೆ ಇದೇ ಜಿಲ್ಲೆಯವರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಖಾತೆಗಳಲ್ಲಿ ಒಂದಾಗಿರುವ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಈ ಶಾಲೆಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಲ್ಲಿ ಜೆಟಿಎಸ್‌ ಅಭಿವೃದ್ಧಿಯ ನಿರೀಕ್ಷೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.