ವಾಡಿ: ಪಟ್ಟಣದ ಮೂಲಕ ಹಾದು ಹೋಗಿರುವ ಕಲಬುರಗಿ-ಯಾದಗಿರಿ ಮುಖ್ಯರಸ್ತೆಯಲ್ಲಿ ದನ-ಕರು, ಹಂದಿಗಳ ಉಪಟಳ ಹೆಚ್ಚಾಗಿದ್ದು, ವಾಹನ ಸವಾರರು, ಪಾದಚಾರಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಕೊಟ್ಟಿಗೆಯಲ್ಲಿ ಇರಬೇಕಾದ ದನ ಮತ್ತು ಕುರಿಗಳು ರಸ್ತೆಗಳಲ್ಲಿ ಮತ್ತು ಸಾರ್ವಜನಿಕರ ಸ್ಥಳಗಳಲ್ಲಿ ವಿರಮಿಸುವುದು ಮತ್ತು ಅಲೆದಾಡುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಜತೆಗೆ ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗಿದೆ.
ಪ್ರಮುಖ ವ್ಯಾಪಾರ ಸ್ಥಳವಾಗಿರುವ ಪಟ್ಟಣಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ಪಟ್ಟಣದ ಮೂಲಕ ಕಲಬುರಗಿ–ಯಾದಗಿರಿ ನಡುವಣ ಸಾರಿಗೆ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಬಳಿರಾಮ ಚೌಕ್ ವೃತ್ತದಿಂದ ಶ್ರೀನಿವಾಸ ಗುಡಿ ಚೌಕ್ ವೃತ್ತದವರೆಗೆ ಸಾಗಬೇಕಾದರೆ ಹರಸಾಹಸ ಮಾಡುವಂತಾಗಿದೆ. ಕುರಿ ಮತ್ತು ದನಗಳ ಹಾವಳಿ ಜತೆಗೆ ಹೆದ್ದಾರಿ ಆಕ್ರಮಣದಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ವಾಹನ ಸವಾರರು ಅಳಲು ತೋಡಿಕೊಂಡರು.
ಬಳಿರಾಮ್ ಚೌಕ್, ಸೇವಾಲಾಲ್ ಮಂದಿರ ಹತ್ತಿರ, ಎಂಪಿಎಸ್ ಶಾಲೆ, ಕುಂದನೂರು ಚೌಕ್, ಬಸ್ ನಿಲ್ದಾಣ ವೃತ್ತ, ಕಾಕಾ ಚೌಕ್, ಶಿವಾಜಿ ಚೌಕ್ ಹತ್ತಿರ ದನಗಳು ಮತ್ತು ಕುರಿಗಳ ಹಿಂಡು ರಸ್ತೆ ಮೇಲೆ ಕಾಲು ಚಾಚಿಕೊಂಡು ವಿರಮಿಸುತ್ತವೆ. ಇದರಿಂದ ವಾಹನಗಳನ್ನು ಪಕ್ಕಕ್ಕೆ ತೆಗೆದುಕೊಂಡು ಹೋಗುವ ಸ್ಥಿತಿ ಇದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಗೆ ಹೊಂದಿಕೊಂಡ ಹಲವು ಬಡಾವಣೆಗಳಿಂದ ಬರುವ ಕುರಿ, ದನಗಳು ರಸ್ತೆ ಮೇಲೆ ನಿಂತು, ಮಲಗಿ ತೊಂದರೆ ಕೊಡುತ್ತಿವೆ. ಸಂಚಾರ ದಟ್ಟಣೆಗೂ ಕಾರಣವಾಗುತ್ತಿವೆ.
ಈಚೆಗೆ ಕಲಬುರಗಿ– ಯಾದಗಿರಿ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ಕುರಿ ಸತ್ತಿದ್ದರಿಂದ ಗಲಾಟೆ ಉಂಟಾಗಿತ್ತು. ಬಸ್ ಚಾಲಕನಿಗೆ ದಂಡ ವಿಧಿಸಲಾಗಿತ್ತು.
ವ್ಯಾಪಾರಿಗಳಿಗೂ ಸಮಸ್ಯೆ: ‘ಪಟ್ಟಣದ ಬೀದಿಬದಿ ಹೂವು, ಹಣ್ಣು ತರಕಾರಿ ಹಾಗೂ ದಿನಸಿ ವ್ಯಾಪಾರಿಗಳು ಬಿಡಾಡಿದನ ಮತ್ತು ಕುರಿಗಳ ಹಾವಳಿಗೆ ಬೇಸತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಹಣ್ಣು ಮತ್ತು ತರಕಾರಿಗಳಿಗೆ ಬಾಯಿ ಹಾಕಿ ತಿನ್ನುತ್ತವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಲ್ಕಮ್ಮ.
ಜಾನುವಾರು ಮತ್ತು ಕುರಿಗಳನ್ನು ರಸ್ತೆಗೆ ಬಿಡದ ಹಾಗೇ ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಹಂದಿಗಳ ನಿಯಂತ್ರಣಕ್ಕೂ ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ರಸ್ತೆ ಮೇಲೆ ದನಕರು ಬಿಟ್ಟರೆ ಸಂಬಂಧಿಸಿದ ಮಾಲೀಕರಿಗೆ ತಕ್ಷಣ ನೋಟಿಸ್ ನೀಡುತ್ತೇನೆ ಮತ್ತು ಬಿಡಾಡಿದನಗಳು ರಸ್ತೆ ಮೇಲೆ ಕಂಡುಬಂದರೆ ಗೋಶಾಲೆಗೆ ಸಾಗಿಸಲು ಕ್ರಮ ವಹಿಸಲಾಗುವುದುಸಿ.ಫಕೃದ್ದಿನ್ ಸಾಬ್ ಪುರಸಭೆ ಮುಖ್ಯಾಧಿಕಾರಿ ವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.