ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯ ಗುರುಕುಲ ಶಾಲೆಯ ಎದುರು ಹೆದ್ದಾರಿ ಮೇಲಿನ ಗುಂಡಿಯನ್ನು ಮುಚ್ಚುತ್ತಿರುವ ವಿದ್ಯಾರ್ಥಿಗಳು.
ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯ ಗುರುಕುಲ ಶಾಲೆಯ ಮುಂಭಾಗದ ರಸ್ತೆ ಗುಂಡಿಗಳನ್ನು ವಿದ್ಯಾರ್ಥಿಗಳೇ ಮುಚ್ಚುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿನ ಗುರುಕುಲ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-50 ಸಂಪೂರ್ಣ ಹದಗೆಟ್ಟಿದ್ದು, ಗುರುಕುಲ ಶಾಲೆಯಿಂದ ಫುಡ್ ಪಾರ್ಕ್‌ವರೆಗೆ ರಸ್ತೆ ಗುಂಡಿಗಳಿಂದ ತುಂಬಿದೆ. ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ರಸ್ತೆಗೆ ಕಾಯಕಲ್ಪ ಕಲ್ಪಿಸಲು ಸಾಕಷ್ಟು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಜನರು ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ.
ಕೊನೆಗೆ ಗುರುಕುಲ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಶಾಲೆ ಬಿಟ್ಟ ನಂತರ ಪಾಲಕರ ಜತೆ ಮನೆಗೆ ಹೋಗದೆ ಬುಟ್ಟಿ ತೆಗೆದುಕೊಂಡು ರಸ್ತೆಗೆ ಇಳಿದು ವಿಧ್ಯಾರ್ಥಿಗಳು ಗುಂಡಿಗಳಿಗೆ ಕಲ್ಲು, ಮಣ್ಣು ತುಂಬಿ ಮುಚ್ಚಿದ್ದಾರೆ.
ನಿತ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೇ ರಸ್ತೆ ಮೂಲಕ ತಮ್ಮ ಕಚೇರಿಗೆ ತೆರಳುತ್ತಾರೆ. ಆದರೆ, ರಸ್ತೆ ಗುಂಡಿ ಅವರ ಕಣ್ಣಿಗೆ ಬೀಳದಿರುವುದು ದುರ್ದೈವ.
‘ಚುನಾವಣೆ ಬಂದರೆ ಬೆಂಬಲಿಗರ ಜೊತೆ ಬಂದು ಮತ ಕೇಳುವ ಜನಪ್ರತಿನಿಧಿಗಳಿಗೆ ಇಂತಹ ಸಮಸ್ಯೆಗಳು ಕಾಣುವುದಿಲ್ಲ. ಸದ್ಯ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡಿರುವ ವಿದ್ಯಾರ್ಥಿಗಳು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಣ್ಣು ತೆರೆಸಿರೋದಂತು ಸತ್ಯ’ ಎನ್ನುತ್ತಾರೆ ಸಾರ್ವಜನಿಕರು.
ಪಟ್ಟಣದ ಗುರುಕುಲ ಶಾಲೆಯಿಂದ ಫುಡ್‌ಪಾರ್ಕ್ ವರೆಗೆ ಕೆಕೆಆರ್‌ಡಿಬಿ ವತಿಯಿಂದ ₹1.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಲ್ಯಾಂಡ್ ಆರ್ಮಿಗೆ ಗುತ್ತಿಗೆ ನೀಡಲಾಗಿದೆತಜಮುಲ್ಲಾ ಹುಸೇನ್
ವಿಡಿಯೋ ವೈರಲ್!:
ವಿದ್ಯಾರ್ಥಿಗಳು ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 50 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು ಅನೇಕರು ಕಾಮೆಂಟ್‌ಗಳನ್ನು ಹಾಕಿ ಶೇರ್ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಚರ್ಚೆ ಎರಡು ನಡೆಯುತ್ತೆ. ಮಕ್ಕಳ ಶ್ರಮ ಹಾಗೂ ಬದ್ಧತೆಯನ್ನು ಪ್ರಶಂಸಿದರೆ ಕೆಲವರು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.