ಜೇವರ್ಗಿ: ‘ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ. ಪೋಷಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಶ್ರಮಿಸಬೇಕು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಅಲ್ ನೂರ್ ಏಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್‌ನ ನವ ಭಾರತ ವಿಜ್ಞಾನ ಹಾಗೂ ಕಲಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟ ಪಟ್ಟು ಓದಬೇಕು. ಪಡೆದ ಶಿಕ್ಷಣವನ್ನು ಜ್ಞಾನವನ್ನಾಗಿ, ಜ್ಞಾನವನ್ನು ಕೌಶಲ್ಯವನ್ನಾಗಿ ಪರಿವರ್ತಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಆತ್ಮವಿಶ್ವಾಸ ವೃದ್ಧಿಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಾಗ ಭವಿಷ್ಯ ಉತ್ತಮವಾಗಲು ಸಾಧ್ಯವಾಗುತ್ತದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಹಂತದಲ್ಲಿ ಪೈಪೋಟಿ ಇರುತ್ತದೆ ಅದಕ್ಕೆ ತಕ್ಕಂತೆ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು’ ಎಂದರು
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಖಾಜಾ ಅಬ್ದುಲ್ ಮಾಜೀದ್ ಸೇಠ ಗಿರಣಿ ಮಾತನಾಡಿ, ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸುವುದು ಸೂಕ್ತವಾಗಿದೆ ಎಂದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಮುಖಂಡ ಶಿವರಾಜ ಪಾಟೀಲ ರದ್ದೇವಾಡಗಿ, ಶಾಂತಾ ಆಸ್ಪತ್ರೆ ಚೇರಮನ್ ಡಾ.ಸಂಜೀವ ಪಾಟೀಲ, ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಮುಖಂಡರಾದ ರಾಜಶೇಖರ ಸಾಹು ಸೀರಿ, ಸದಾನಂದ ಪಾಟೀಲ, ದಾನಪ್ಪಗೌಡ ಹಳಿಮನಿ, ರುಕುಂ ಪಟೇಲ ಇಜೇರಿ, ಸಿದ್ದಲಿಂಗರೆಡ್ಡಿ ಇಟಗಿ, ಕಾಶೀರಾಯಗೌಡ ಯಲಗೋಡ ಭಾಗವಹಿಸಿದ್ದರು.
ಇದೇ ವೇಳೆ 2024ನೇ ಸಾಲಿನಲ್ಲಿ ಪಿಯು ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ನವಭಾರತ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಅವರಿಗೆ ₹10 ಸಾವಿರ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.