
ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ನಾಲಾಯಕ್’ ಪದ ಬಳಸಿ ಟೀಕಿಸಿದ್ದು ಖಂಡನೀಯ. ಈ ಮೂಲಕ ತಮ್ಮನ್ನು ತಾವೇ ಯೋಗ್ಯತೆ ಮತ್ತು ನಾಗರಿಕತೆ ಇಲ್ಲದ ವ್ಯಕ್ತಿ ಎಂದು ನಿರೂಪಿಸಿಕೊಂಡಿದ್ದಾರೆ’ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುಧಾ ಹಾಲಕೈ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವ್ಯಕ್ತಿತ್ವವೇ ಇಲ್ಲದಂತಹ ಪ್ರಿಯಾಂಕ್ ಖರ್ಗೆ ನಿಜವಾದ ಅರ್ಥದಲ್ಲಿ ಕರ್ನಾಟಕದ ನಾಲಾಯಕ್ ಮಂತ್ರಿ. ತಮ್ಮ ಐಟಿ–ಬಿಟಿ, ಗ್ರಾಮೀಣಾಭಿವೃದ್ಧಿಯಲ್ಲಿ ಯಾವುದೇ ಸಾಧನೆ ಮಾಡದ ಪ್ರಿಯಾಂಕ್ ಮಾತನಾಡುವುದನ್ನೇ ಸಾಧನೆ ಎಂದುಕೊಂಡಿದ್ದಾರೆ’ ಎಂದು ಟೀಕಿಸಿದರು.
‘ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದ್ದು, ಕೈಗಾರಿಕೆಗಳು ಕರ್ನಾಟಕದಿಂದ ವಲಸೆ ಹೋಗಿದ್ದು, ಗೂಗಲ್ ಸಂಸ್ಥೆಯವರು ಸುಮಾರು 1 ಲಕ್ಷ 30 ಸಾವಿರ ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡಿದಾಗ ಪ್ರಿಯಾಂಕ್ ಖರ್ಗೆ ಅವರು ನಾಲಾಯಕ್ ಮಂತ್ರಿ ಎಂದು ಸಾಬೀತಾಗಿದೆ’ ಎಂದು ಹೇಳಿದರು.
‘370ನೇ ವಿಧಿ ರದ್ದತಿ, ದೇಶದ ಆಂತರಿಕ ಭದ್ರತೆ ಸುಧಾರಣೆ, ಪಿಎಫ್ಐ ನಿಷೇಧ ಮತ್ತಿತರ ಉತ್ತಮ ಕಾರ್ಯಗಳನ್ನು ಮಾಡಿರುವ ಅಮಿತ್ ಶಾ ಅವರ ಬಗ್ಗೆ ಮಾತನಾಡುವ ನೈತಿಕತೆ ಪ್ರಿಯಾಂಕ್ ಅವರಿಗೆ ಇಲ್ಲ’ ಎಂದರು.
ಗೋಷ್ಠಿಯಲ್ಲಿ ಗಿರಿರಾಜ ಎಳಿಮೇಲಿ, ಸಪ್ನಾ ಮಂಗಲಗಿ, ಅನಿಲ್ ಸಿರನೂರಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.