ADVERTISEMENT

ಕಬ್ಬಿನ ಬೆಲೆ ನಿಗದಿ ಮಾಡದಿದ್ದರೆ 17ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 7:56 IST
Last Updated 11 ನವೆಂಬರ್ 2021, 7:56 IST
ಜಗದೀಶ ಪಾಟೀಲ
ಜಗದೀಶ ಪಾಟೀಲ   

ಕಲಬುರಗಿ: ‘ಕಬ್ಬಿನ ದರ ನಿಗದಿ ಮಾಡುವಂತೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಸಭೆ ಕರೆಯುತ್ತಿಲ್ಲ. ಇದೇ 15ರೊಳಗಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆ ಕರೆದು ಕಬ್ಬಿನ ದರವನ್ನು ಪ್ರತಿ ಟನ್‌ಗೆ ₹ 2800 ನಿಗದಿಗೊಳಿಸಬೇಕು. ಇಲ್ಲದಿದ್ದರೆ ನ 17ರಂದು ಪ್ರತಿಭಟನೆ ಅನಿವಾರ್ಯ’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘವು ಎಚ್ಚರಿಕೆ ನೀಡಿದೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ, ‘ಸಕ್ಕರೆ ಬೆಲೆ ಕಳೆದ ಬಾರಿ ಕೆ.ಜಿ.ಗೆ ₹ 32 ಇದ್ದುದು, ಈಗ ₹ 38 ಇದೆ. ಅದಕ್ಕೆ ತಕ್ಕಂತೆ ಕಬ್ಬಿನ ದರವನ್ನು ಪ್ರತಿ ಟನ್‌ಗೆ ₹ 2800ಕ್ಕೆ ನಿಗದಿ ಮಾಡುವ ಮೂಲಕ ಅದರ ಲಾಭವನ್ನು ರೈತರಿಗೆ ವರ್ಗಾಯಿಸಬೇಕು. ಆದರೆ, ಈ ಬಗ್ಗೆ ಚಕಾರವೆತ್ತರ ಕಾರ್ಖಾನೆಗಳು ಈಗಲೂ ₹ 2300 ದರದಲ್ಲೇ ಕಬ್ಬು ಖರೀದಿ ಮಾಡುತ್ತಿವೆ. ಅಲ್ಲದೇ, ಕಬ್ಬಿನ ಉಪ ಉತ್ಪನ್ನವಾದ ಇಥೆನಾಲ್‌ನ್ನು ಇಂಧನದಲ್ಲಿ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದರಿಂದಲೂ ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತವೆ. ಹೀಗಾಗಿ, ದರವನ್ನು ಹೆಚ್ಚಿಸಲೇಬೇಕು‘ ಎಂದು ಒತ್ತಾಯಿಸಿದರು.

‘ಹಿಂದಿನ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರನ್ನು ಒಂದೆಡೆ ಸೇರಿಸಿ ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರು. ಆದರೆ, ಈಗಿನ ಜಿಲ್ಲಾಧಿಕಾರಿ ಹಲವು ಬಾರಿ ಮನವಿ ಮಾಡಿದರೂ ಸಭೆ ನಿಗದಿಪಡಿಸುತ್ತಿಲ್ಲ. ತಿಂಗಳಿಗೆ ಒಂದು ಗಂಟೆ ಸಮಯ ಕೊಟ್ಟರೆ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ಹೇಳಿಕೊಳ್ಳಬಹುದು. ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ ನಮ್ಮ ಬೇಡಿಕೆಗಳ ಈಡೇರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಸಭೆಯೇ ನಿಗದಿಯಾಗದ್ದರಿಂದ ರೈತರ ಕಬ್ಬಿನ ಬಾಕಿಯೂ ಸಾಕಷ್ಟು ಉಳದಿದೆ‘ ಎಂದರು.

ADVERTISEMENT

ಸಂಘದ ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ಉಪಾಧ್ಯಕ್ಷ ಶಾಂತವೀರಪ್ಪ ಕಲಬುರಗಿ, ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತವೀರ ಪಾಟೀಲ, ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಬಿಲಾಡ, ಕಮಲಾಪೂರ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ ಹೊಳಕುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.