ADVERTISEMENT

ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:30 IST
Last Updated 20 ನವೆಂಬರ್ 2025, 6:30 IST
ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯ ಸಭೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿದರು
ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯ ಸಭೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿದರು   

ಅಫಜಲಪುರ: ‘ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ₹2,950 ಮತ್ತು ಸರ್ಕಾರ ₹50 ನೀಡುವುದಾಗಿ ಒಪ್ಪಿರುವುದಾಗಿ ಕಾರ್ಖಾನೆಗಳ ಆಡಳಿತ ಮಂಡಳಿಯವರು ಲಿಖಿತ ರೂಪದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ‘ಈ ಮೊದಲು ಘೋಷಿಸಿದ್ದ ₹3,161 ರಲ್ಲಿ ₹3,000ವಷ್ಟೇ ದರ ನಿಗದಿಯಾಗಿದೆ. ಉಳಿದ ₹161 ಬೆಲೆಗಾಗಿ ನ.20 ರಿಂದ ರೈತರು ಧರಣಿ ಸತ್ಯಾಗ್ರಹ ಮಾಡಲು ಮುಂದಾಗಿದ್ದರು. ಆದರೆ, ಈಗಾಗಲೇ ರೈತರ ಕಬ್ಬು ಕಟಾವು ಮಾಡುತ್ತಿರುವುದರಿಂದ  ಹೋರಾಟವನ್ನು ಎಲ್ಲರ ಒಮ್ಮತದಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ಪ್ರತಿನಿಧಿಯಾಗಿ ಆಹಾರ ಇಲಾಖೆ ಡಿಡಿ ಭೀಮರಾಯ ಮಸಳಿ ಅವರು ಅಫಜಲಪುರದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿ ಟನ್ ಕಬ್ಬಿಗೆ ₹3,161.94 ಘೋಷಣೆ ಮಾಡಿದ್ದರು. ಆದರೆ, ಕಾರ್ಖಾನೆಗಳು ರಿಕವರಿ ಆಧಾರದ ಮೇಲೆ ದರ ನಿಗದಿ ಮಾಡಲು ತಿಳಿಸಿದಾಗ, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಜಿಲ್ಲೆಯಾದ್ಯಂತ ಏಕರೂಪ ದರ ತಂದು ಎಲ್ಲರಿಗೂ ಸಮಾನ ದರ ಸಿಗುವಂತೆ ಮಾಡಿದ್ದಾರೆ’ ಎಂದರು.

ADVERTISEMENT

ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಪ್ರಮುಖ ಶ್ರೀಮಂತ ಬಿರಾದಾರ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ದರಕ್ಕೆ ನಮ್ಮ ಒಪ್ಪಿಗೆಯಿಲ್ಲ. ರೈತರ ಹಿತಕ್ಕಾಗಿ ಹೋರಾಟ ಮುಂದೂಡುತ್ತೇವೆ’ ಎಂದು ತಿಳಿಸಿದರು.

ಸಭೆಯಲ್ಲಿ ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಚಿದಾನಂದ ಮಠ, ಗುರು ಚಾಂದಕವಟೆ, ಶ್ರೀಶೈಲ ಬಳೂರಗಿ, ಸಿದ್ದುಗೌಡ ಪಾಟೀಲ, ಬಸಣ್ಣ ಗುಣಾರಿ, ರಮೇಶಗೌಡ ಪಾಟೀಲ, ಚಂದ್ರಕಾಂತ ಇಬ್ರಾಹಿಂಪೂರ, ಲತೀಪ ಪಟೇಲ ಭೋಗನಳ್ಳಿ, ಶಂಕರಲಿಂಗ ಮೇತ್ರಿ, ಗುರಲಿಂಗಪ್ಪ ನಿರೋಣಿ, ಪ್ರಭಾವತಿ ಮೇತ್ರಿ, ರಾಚಯ್ಯ ಮಠ, ಅಣ್ಣಾರಾಯಗೌಡ ಪಾಟೀಲ, ಕಲ್ಲಪ್ಪ ಅಂಜುಟಗಿ, ವಿಜಯಕುಮಾರ ಪಾಟೀಲ, ಧರೆಪ್ಪ ಅಂಜುಟಗಿ, ಬಸವರಾಜ ಲಾಳಸಂಗಿ, ಬಸವರಾಜ ಜಮಾದಾರ, ಸುಕದೇವ ಸುತಾರ, ಬಸವರಾಜ ಪಾಟೀಲ, ರಮೇಶ್ ಪಾಟಿಲ್ , ಸಿದ್ದಯ್ಯ ಆಕಾಶ್ ಮಠ, ಮಲ್ಲನಗೌಡ ಪಾಟೀಲ, ಸಾಗರ ಅಂಜುಟಗಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.