ಕಲಬುರಗಿ: ‘ರಾಜ್ಯ ಸರ್ಕಾರ ನವೆಂಬರ್ 1ರಿಂದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನುರಿಸಲು ಅನುಮತಿ ಕೊಟ್ಟಿದೆ. ಕಬ್ಬು ಬೆಳೆಗಾರರು ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೆ ಜಿಲ್ಲಾಧಿಕಾರಿ ಜಂಟಿ ಸಭೆ ಕರೆದು ದರ ನಿಗದಿ ಬಳಿಕವೇ ಕಾರ್ಖಾನೆಗಳ ಆರಂಭಕ್ಕೆ ಸೂಚನೆ ನೀಡಬೇಕು’ ಎಂದು ಭೂಸನೂರ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಧರ್ಮರಾಜ ಬಿ. ಸಾಹು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಟನ್‌ಗೆ ₹4,000 ದರ ನೀಡಬೇಕು. ಎಫ್‌ಆರ್‌ಪಿ ಪ್ರಕಾರ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗಾಗಿ ಹಣ ಪಾವತಿಸದಿದ್ದರೆ ಶೇ 15ರಷ್ಟು ಬಡ್ಡಿ ಕೊಡಬೇಕೆಂಬ ಕಾನೂನು ಇದ್ದರೂ ಸಕಾಲಕ್ಕೆ ಪಾವತಿ ಮಾಡುತ್ತಿಲ್ಲ. ವಿಳಂಬ ಮಾಡುವ ಕಾರ್ಖಾನೆಯಿಂದ ರೈತರ ಖಾತೆಗೆ ಸ್ವಯಂಚಾಲಿತವಾಗಿ ಬಡ್ಡಿ ಸಮೇತ ಹಣ ಪಾವತಿಯಾಗುವಂತೆ ಎಫ್‌ಆರ್‌ಪಿ ಕಾನೂನಿಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.
‘ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ಕಬ್ಬಿನ ಇಳುವರಿ ಅಂದರೆ ರಿಕವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತವೆ. ಪ್ರತಿ ಕಾರ್ಖಾನೆಯಲ್ಲಿ ರಿಕವರಿ ನಿಗಾವಹಿಸಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರತಿ ಟನ್‌ಗೆ ₹450ರಿಂದ ₹600 ಆಗುತ್ತದೆ. ಆದರೆ, ಕಾರ್ಖಾನೆಗಳು ₹800ರಿಂದ ₹850 ಕಡಿತಗೊಳಿಸಿ ರೈತರಿಗೆ ಮೋಸ ಮಾಡುತ್ತವೆ’ ಎಂದು ದೂರಿದರು.
‘ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರದ ಪೂರಕವಾಗಿ 2022ರಲ್ಲಿ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ‘ಕಬ್ಬುಮಿತ್ರ’ ಆ್ಯಪ್ ಉದ್ಘಾಟಿಸಿತ್ತು. ಆದರೆ, ಸಾಫ್ಟ್‌ವೇರ್ ನೆಪವೊಡ್ಡಿ ಇಲ್ಲಿಯವರೆಗೆ ಜಾರಿ ಮಾಡಿಲ್ಲ. ರೈತರನ್ನೊಳಗೊಂಡ ದ್ವಿಪಕ್ಷೀಯ ಒಪ್ಪಂದ ಪತ್ರ, ಕಟಾವು ಮತ್ತು ಸಾಗಾಣಿಕೆ ದಿನಾಂಕ ಎಲ್ಲವನ್ನು ಒಳಗೊಂಡಿರುವ ಈ ಆ್ಯಪ್ ಶೀಘ್ರ ಜಾರಿಗೊಳಿಸಬೇಕು. ಕಬ್ಬು ಬೆಳೆ ಕೂಡ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು. ಬಸವರಾಜ ಪಾಟೀಲ, ಶಾಂತವೀರಪ್ಪ ದಸ್ತಾಪೂರ, ಕೇಶಪ್ಪ ಕೊರಳ್ಳಿ, ವಿಶ್ವನಾಥ ಪಾವಡಶೆಟ್ಟಿ, ಶಿವುಕುಮಾರ ಸ್ವಾಮಿ, ಶರಣು ಜಮಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.