ADVERTISEMENT

ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:19 IST
Last Updated 17 ನವೆಂಬರ್ 2025, 6:19 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಜಿಲ್ಲೆಯ ಎಲ್ಲಾ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹2,950ನಂತೆ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ರೈತರಿಗೆ ಹಣ ನೀಡಲು ಒಪ್ಪಿಕೊಂಡಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಮುಖ್ಯಮಂತ್ರಿ ಅವರು ನಿರಂತರವಾಗಿ‌ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೂ ಈ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ. ದರ ನಿಗದಿಪಡಿಸಿದಂತೆ ಕೊಡಲು ಅವರು ಒಪ್ಪಿಗೆ ನೀಡಿದ್ದಾರೆ. ಸರ್ಕಾರದಿಂದ ₹50 ಸಿಗಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

3-4 ದಿನಗಳಲ್ಲಿ ರೈತರ ಖಾತೆಗೆ: ಆಗಸ್ಟ್‌ ತಿಂಗಳಿನಲ್ಲಿ ಶೇ 69ರಷ್ಟು ಹೆಚ್ಚುವರಿ ಹಾಗೂ ಸೆಪ್ಟೆಂಬರ್‌ನಲ್ಲಿ ಶೇ 63ರಷ್ಟು ಹೆಚ್ಚುವರಿಯಾಗಿ ಸತತ ಸುರಿದ ಮಳೆಯಿಂದಾಗಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆಯ ವರದಿಯ ಅನುಸಾರ 3.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬೆಳೆ ಹಾನಿಯಾದ ರೈತರ ವಿವರವನ್ನು ಈಗಾಗಲೇ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ್ದು, ಒಟ್ಟು 3,26,183 ರೈತರಿಗೆ ₹250.97 ಕೋಟಿ ಬೆಳೆ ಹಾನಿ ಪರಿಹಾರ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ’ ಎಂದು ಸಚಿವರು ಹೇಳಿದರು.

ADVERTISEMENT

‘ಬೆಳೆ ಹಾನಿಯಾದ ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಅರಿಶಿಣ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಒಟ್ಟು 2,67,560 ರೈತರ 3,35,046.2 ಹೆಕ್ಟೇರ್‌ ಪ್ರದೇಶಕ್ಕೆ ಬೆಳೆ ವಿಮೆ ಮಧ್ಯಂತರ ಪರಿಹಾರ ನೀಡಲು ಸರ್ಕಾರ ಆದೇಶಿಸಿದೆ. ಬೆಳೆ ವಿಮೆ ಯೋಜನೆಯಡಿಯಲ್ಲಿ ಮಧ್ಯಂತರ ಪರಿಹಾರ ₹ 243.41 ಕೋಟಿ ಬಿಡುಗಡೆ ಆಗಿದೆ. ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ’ ಎಂದರು.

‘ಉದ್ದು, ಹೆಸರು, ಸೋಯಾಅವರೆ ಹಾಗೂ ಇನ್ನಿತರ ಬೆಳೆಗಳಿಗೆ ಬೆಳೆಹಾನಿ ಕುರಿತು ಪ್ರಕೃತಿ ವಿಕೋಪದಡಿ ದೂರು ನೀಡಿದ ಒಟ್ಟು 22,385 ರೈತರಿಗೆ ₹8.79 ಕೊಟಿ ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ’ ಎಂದು ಸಚಿವರು ವಿವರಿಸಿದರು.

ಶಾಸಕಿ ಕನೀಜ್‌ ಫಾತಿಮಾ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.