ADVERTISEMENT

ಕಬ್ಬಿನ ತೂಕದಲ್ಲಿ ವ್ಯತ್ಯಾಸ: ಆರೋಪ ಸುಳ್ಳು ಎಂದ ಜಗದೀಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:25 IST
Last Updated 18 ಡಿಸೆಂಬರ್ 2025, 4:25 IST
ಜಗದೀಶ ಪಾಟೀಲ ರಾಜಾಪುರ
ಜಗದೀಶ ಪಾಟೀಲ ರಾಜಾಪುರ   

ಕಲಬುರಗಿ: ‘ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆ ತೂಕದಲ್ಲಿ ಮೋಸ ಮಾಡುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ಹೇಳಿದರು.‌

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಹಾಬಾದ್ ತಾಲ್ಲೂಕಿನ ಮುತ್ತಗಾದ ರೈತರೊಬ್ಬರು ಈ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದಾರೆ. ತೂಕ ಮಾಡುವಾಗ ಒಂದು ಟನ್ ಕಡಿಮೆ ತೋರಿಸಿದೆ ಎಂದು ತಿಳಿಸಿದ್ದರು. ವಿಷಯ ತಿಳಿದು ಅಧಿಕಾರಿಗಳೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ತೂಕ ಸರಿಯಾಗಿಯೇ ಇತ್ತು. ರೈತರು ಹೊರಗಡೆ ತೂಕ ಮಾಡಿಸಿದ ಪುರಾವೆ ತೋರಿಸುತ್ತಿಲ್ಲ. ಅವರ ಆರೋಪದಲ್ಲಿ ಹುರುಳಿಲ್ಲ’ ಎಂದು ತಿಳಿಸಿದರು.

‘ಈ ಆರೋಪದ ಬಳಿಕ ಕಾರ್ಖಾನೆ ಆ ಊರಿನ ರೈತರ ಕಬ್ಬು ಕಟಾವಿಗೆ ಆದೇಶ ನೀಡುತ್ತಿಲ್ಲ. ಇದರಿಂದ ಸಂಕಷ್ಟ ಎದುರಾಗಿದೆ. ಯಾರೋ ಒಬ್ಬರು ಮಾಡುವ ಆರೋಪದಿಂದ ಇತರ ರೈತರಿಗೆ ತೊಂದರೆಯಾಗುತ್ತಿದೆ’ ಎಂದರು. 

ADVERTISEMENT

‘ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳಲ್ಲಿ ಸಿದ್ಧಸಿರಿ ಕಾರ್ಖಾನೆ ಮಾತ್ರ ಟನ್‌ ಕಬ್ಬಿಗೆ ₹2,550 ಕೊಟ್ಟಿದೆ. ವ್ಯತ್ಯಾಸದ ಹಣವನ್ನು 15 ದಿನಗಳಲ್ಲಿ ಕೊಡಲು ಒಪ್ಪಿಕೊಂಡಿದೆ. ಆದರೆ, ಇತರ ಕಾರ್ಖಾನೆಗಳು ರೈತರ ಕಬ್ಬು ತೆಗೆದುಕೊಂಡು ತಿಂಗಳಾದರೂ ಹಣ ನೀಡಿಲ್ಲ. ನಿಯಮದ ಪ್ರಕಾರ 15 ದಿನಗಳೊಳಗೆ ಹಣ ನೀಡದಿದ್ದರೆ, ಬಡ್ಡಿ ಸೇರಿಸಿ ₹3,000 ಕೊಡಬೇಕಾಗಿರುತ್ತದೆ. ಜಿಲ್ಲಾಧಿಕಾರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಬ್ಬಿನ ಹಣ ಕೊಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಶಾಂತವೀರಪ್ಪ ಕಲಬುರಗಿ, ತಿಪ್ಪಣ್ಣಗೌಡ ಪಾಟೀಲ, ಬಸವರಾಜ ಪಂಚಾಳ, ದಸ್ತಗೀರ ಪಾಟೀಲ, ಮಲ್ಲಣ್ಣ ತಳವಾರ, ಸೂರ್ಯಕಾಂತ ಪೂಜಾರಿ, ಮಲ್ಲು ಬಿ.ಪೂಜಾರಿ, ಮಹೇಬೂಬ ಪಟೇಲ, ನಾಗಣ್ಣ ಪೂಜಾರಿ, ರಾಘವೇಂದ್ರ ಹಳ್ಳಿ ಸೇರಿ ಹಲವರು ಹಾಜರಿದ್ದರು.