ADVERTISEMENT

ಋಷಿಸದೃಷ್ಯರಾಗಿ ಬದುಕಿದ ಸ್ವಾಮಿ ವಿವೇಕಾನಂದ: ವೀಣಾ ಬನ್ನಂಜೆ ಬನ್ನಣೆ

‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಸಭಾ ಕಾರ್ಯಕ್ರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:35 IST
Last Updated 13 ಅಕ್ಟೋಬರ್ 2018, 12:35 IST
ಕಲಬುರ್ಗಿಯಲ್ಲಿ ಶನಿವಾರ ನಡೆದ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆಯಲ್ಲಿ ನೂರಾರು ಮಕ್ಕಳು ಸ್ವಾಮಿ ವಿವೇಕಾನಂದರ ವೇಷದಲ್ಲಿ ಗಮನಸೆಳೆದರು
ಕಲಬುರ್ಗಿಯಲ್ಲಿ ಶನಿವಾರ ನಡೆದ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆಯಲ್ಲಿ ನೂರಾರು ಮಕ್ಕಳು ಸ್ವಾಮಿ ವಿವೇಕಾನಂದರ ವೇಷದಲ್ಲಿ ಗಮನಸೆಳೆದರು   

ಕಲಬುರ್ಗಿ: ‘ನಾವು ಇಂದು ಆಡಿದ ಮಾತು ನಾಳೆಗೇ ಮರೆತುಹೋಗುತ್ತದೆ. ಆದರೆ, ಸ್ವಾಮಿ ವಿವೇಕಾನಂದರು 125 ವರ್ಷಗಳ ಹಿಂದೆ ಆಡಿದ ಮಾತುಗಳು ಇಂದಿಗೂ ನಮ್ಮಲ್ಲಿ ಸ್ಥೈರ್ಯ ತುಂಬುತ್ತಿವೆ. ನಮ್ಮೊಳಗಿನ ಶಕ್ತಿಯನ್ನು ಜಾಗ್ರತಗೊಳಿಸುತ್ತಿವೆ. ಆ ಮಾತುಗಳಿಗೆ ಎಂಥ ಶಕ್ತಿ ಇದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಲೇಖಕಿ ವೀಣಾ ಬನ್ನಂಜೆ ಹೇಳಿದರು.

ಸ್ವಾಮಿ ವಿವೇಕಾನಂದರು ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ (1893ರ ಸೆಪ್ಟೆಂಬರ್ 11) ಭಾಷಣ ಮಾಡಿದ 125ನೇ ವರ್ಷಾಚರಣೆ ಅಂಗವಾಗಿ ಯುವ ಬ್ರಿಗೇಡ್‌ ಹಾಗೂ ನಿವೇದಿಯಾ ಪ್ರತಿಷ್ಠಾನದ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ನಮ್ಮನ್ನು ಸಂಪೂರ್ಣವಾಗಿ ಅರ್ಪಣೆ ಮಾಡಿಕೊಳ್ಳದ ಹೊರತು ಯಾವುದೇ ಕ್ಷೇತದಲ್ಲಿ ಸಾಧನೆ ಸಾಧ್ಯವಿಲ್ಲ. ಕೆಲವೇ ದಶಕಗಳ ಹಿಂದೆ ಸ್ವಾಮಿ ವಿವೇಕಾನಂದರಂಥ ಒಬ್ಬ ವ್ಯಕ್ತಿ ಬದುಕಿದ್ದರು. ನಮ್ಮ ಹಿರಿಯರು ಅವರನ್ನು ಕಣ್ಣಾರೆ ಕಂಡಿದ್ದಾರೆ. ನಮ್ಮಂಥದ್ದೇ ಒಬ್ಬ ವ್ಯಕ್ತಿಯಾಗಿ ಹುಟ್ಟಿದ ಅವರು ಋಷಿಸದಷ್ಯರಾಗಿ ಬದುಕಿದರು. ಈ ದೇಶದ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಅವರ ಅರ್ಪಣಾ ಮನೋಭಾವ ಅಪರಿಮಿತ’ ಎಂದರು.

ADVERTISEMENT

‘ಪ್ರತಿ ಸಂಶಯ ನಂಬಿಕೆಯಲ್ಲಿ ಕೊನೆಯಾಗಬೇಕು, ಪ್ರತಿ ನಂಬಿಕೆ ಸಂಶಯದಿಂದಲೇ ಆರಂಭವಾಗಬೇಕು ಎಂದು ಸತ್ಯಕಾಮ ಹೇಳಿದ್ದಾರೆ. ಅದೇ ರೀತಿ ಸ್ವಾಮಿ ವಿವೇಕಾನಂದರು ಪ್ರತಿಯೊಂದನ್ನೂ ಸಂಶಯದಿಂದಲೇ ಕಂಡು ನಂಬಿಕೆ ಮೂಡಿಸಿಕೊಂಡರು. ಆದರೆ, ಇಂದಿನ ಬಹುಪಾಲು ಸ್ವಯಂಘೋಷಿತ ಬುದ್ಧಿಜೀವಿಗಳು ಎಲ್ಲವನ್ನೂ, ಎಲ್ಲರನ್ನೂ ಸಂಶಯದಿಂದಲೇ ನೋಡುತ್ತಾರೆ. ಉತ್ತರ ಕಂಡುಕೊಳ್ಳಲು ಸಿದ್ಧರಿಲ್ಲ. ಹೀಗೆ ಕೊನೆಗೊಳ್ಳದ ಸಂಶಯ ವಿನಾಶಕ್ಕೆ ಹಾದಿಯಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಐದನೇ ತರಗತಿ ಪಾಸಾದವರಿಗೆ ಇರುವ ನೌಕರಿ ಪಡೆಯಲು ಸ್ನಾತಕೋತ್ತರ, ಪಿಎಚ್‌.ಡಿ ಪದವಿ ಪಡೆದವರೂ ಮುಗಿಬೀಳುತ್ತಿದ್ದಾರೆ. ದೇಶದ ಯುವಸಂಪತ್ತನ್ನು ಬಳಸಿಕೊಳ್ಳುವಲ್ಲಿ ನಾವು ಎಷ್ಟು ಹಿಂದೆ ಬಿದ್ದಿದ್ದೇವೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋಟ್ಯಂತರ ಯುವಸಮೂಹ ಸಿಗಲಾರದ ಸರ್ಕಾರಿ ನೌಕರಿ ಹಿಂದೆ ಬಿದ್ದಿದೆ. ಅಗತ್ಯವಾಗಿ ಬೇಕಾದ ಜ್ಞಾನ, ಬುದ್ಧಿ ಮತ್ತು ಬಲವನ್ನು ಸಂಪಾದಿಸಿಕೊಳ್ಳುತ್ತಿಲ್ಲ. ಇದರಿಂದ ಹೊರಬಂದು ಬಲಿಷ್ಠ ಭಾರತ ಕಟ್ಟಬೇಕಾದರೆ ಸ್ವಾಮಿ ವಿವೇಕಾನಂದರನ್ನೇ ಮೊರೆಹೋಗಬೇಕು’ ಎಂದು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಲೇಖಕ ನಿತ್ಯಾನಂದ ವಿವೇಕವಂಶಿ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಮಹೇಶ್ವರಾನಂದ ಸಾನ್ನಿಧ್ಯ ವಹಿಸಿದ್ದರು.

ಗಮನಸೆಳೆದ ಪುಟಾಣಿ ವಿವೇಕಾನಂದರು

ಸಮಾರಂಭಕ್ಕೂ ಮುನ್ನ ತಾಡತೇಗನೂರಿನ ಸ್ವಾಮಿ ವಿವೇಕಾನಂದ ವಿದ್ಯಾಪೀಠದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ವೀರಸನ್ಯಾಸಿಯ ವೇಷ ಧರಿಸಿ ನಗರದಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.

ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಶರಣಬಸವಪ್ಪ ಅಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕುಲಪತಿ ಡಾ.ನಿರಂಜನ ನಿಷ್ಠಿ, ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ, ಸ್ವಾಮಿ ಮಹೇಶ್ವರಾನಂದ ಹಾಗೂ ಯುವ ಬ್ರಿಗೇಡ್‌ ಪದಾಧಿಕಾರಿಗಳು ಪಾಲ್ಗೊಂಡರು.

ಮೆರವಣಿಗೆ ಸರ್ದಾರ್‌ ವಲ್ಲಭಭಾಯಿ ವೃತ್ತ ಸುತ್ತುವರಿದು, ರಂಗಮಂದಿರ ತಲುಪಿತು. ಮಾರ್ಗದುದ್ದಕ್ಕೂ ವಿವೇಕಾನಂದ ಹಾಗೂ ಸಹೋದರಿ ನಿವೇದಿತಾ ಅವರ ಭಾವಚಿತ್ರ ಇರುವ ಧ್ವಜಗಳು ಹಾರಾಡಿದವು. ಮಕ್ಕಳು ಸ್ವಾಮೀಜಿಯ ವೀರ ಸಂದೇಶವನ್ನು ಕೂಗಿ ಹೇಳುತ್ತ, ಭಿತ್ತಿಪತ್ರ ಪ್ರದರ್ಶಿಸುತ್ತ ಸಾಗಿದರು.

ದೊಡ್ಡಪ್ಪ ಅಪ್ಪ ಪದವಿಪೂರ್ವ ಕಾಲೇಜು, ನೂತನ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಮೆರವಣಿಗೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.