ADVERTISEMENT

ಸಂಕ್ರಾಂತಿ: ಪುಣ್ಯಸ್ನಾನ ಮಾಡುತ್ತಿದ್ದಾಗ ಸ್ವಾಮೀಜಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 14:22 IST
Last Updated 14 ಜನವರಿ 2022, 14:22 IST
ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ
ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ   

ಕಮಲಾಪುರ (ಕಲಬುರಗಿ ಜಿಲ್ಲೆ): ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆಹೋಗಿದ್ದ ತಾಲ್ಲೂಕಿನ ಮಹಾಗಾಂವ ಕಳ್ಳಿಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ (58), ನದಿಯಲ್ಲಿ ಈಜಾಡುತ್ತಿರುವಾಗಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಶಹಾಬಾದ್‌ ತಾಲ್ಲೂಕಿನ ಹೊನಗುಂಟಾದ ಚಂದ್ರಲಾಂಬಿಕಾ ದೇವಸ್ಥಾನದ ಬಳಿ ಕಾಗಿಣಾ ಹಾಗೂ ಭೀಮಾ ನದಿಗಳ ಸಂಗಮಸ್ಥಾನವಿದೆ. ಪ್ರತಿ ವರ್ಷ ಇಲ್ಲಿಯೇ ಸ್ನಾನ ಮಾಡುವುದು ಸ್ವಾಮೀಜಿ ಅವರ ರೂಢಿ. ಈ ಬಾರಿ ಕೂಡ ಶುಕ್ರವಾರ ತೆರಳಿದ್ದರು.

‘ಮಧ್ಯಾಹ್ನ 1ರ ಸುಮಾರಿಗೆ ಭಕ್ತರಾದ ಜಗದೀಶ ಬಿರಾದಾರ,ಶರಣಪ್ಪ ಬಾಳಿ ಹಾಗೂ ಇತರರ ಜೊತೆಗೂಡಿ ಸ್ವಾಮೀಜಿ ಈಜಾಡುತ್ತಿದ್ದರು. ಭಕ್ತರು ಈಜುತ್ತ ದಡ ಸೇರಿದರು. ತಿರುಗಿನೋಡುವಷ್ಟರಲ್ಲಿ ಸ್ವಾಮೀಜಿ ನೀರಿನಲ್ಲಿ ಮುಳುಗುತ್ತಿರುವುದು ಕಂಡುಬಂತು. ಸುತ್ತ ಇದ್ದವರು ಅವರನ್ನು ದಡಕ್ಕೆ ಕರೆತಂದರು. ಅಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದ್ದರು. ನೀರು ಕುಡಿದಿರಬಹುದು ಎಂದು ಹೊಟ್ಟೆಭಾಗ ಒತ್ತಿದೆವು. ಆದರೂ ಸ್ವಾಮೀಜಿ ಅವರಿಗೆ ಪ್ರಜ್ಞೆ ಬರಲಿಲ್ಲ. ತಕ್ಷಣ ಶಹಾಬಾದ್‌ನ ಡಾ.ವೀರಭದ್ರಪ್ಪ ಇಂಗಿನಶೆಟ್ಟಿ ಆಸ್ಪತ್ರೆಗೆ ಸಾಗಿಸಲಾಯಿತು. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು’ ಎಂದು ಭಕ್ತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಪಾರ್ಥಿವ ಶರೀರವನ್ನು ಮಹಾಗಾಂವ ಮಠಕ್ಕೆ ತಂದು ಭಕ್ತರ ದರ್ಶನಕ್ಕೆ ಇಡಲಾಗಿದ್ದು, ಇದೇ15ರಂದು (ಶನಿವಾರ) ಮಧ್ಯಾಹ್ನ 3ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.1980ರಲ್ಲಿ ಪೀಠ ಅಲಂಕರಿಸಿದ್ದ ಸ್ವಾಮೀಜಿ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಕೂಡ ತೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.