ADVERTISEMENT

ಕಲಬುರಗಿ: ಮಾಲಿನ್ಯ ರಹಿತ ಹಬ್ಬ ನಿಮ್ಮದಾಗಲಿ...

ಸುಪ್ರೀಂ ಕೋರ್ಟ್‌ ಆದೇಶ ಜಾರಿಗೆ ಅಧಿಕಾರಿಗಳ ತಂಡ ರಚನೆ

ಭೀಮಣ್ಣ ಬಾಲಯ್ಯ
Published 3 ನವೆಂಬರ್ 2021, 7:33 IST
Last Updated 3 ನವೆಂಬರ್ 2021, 7:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಮಾಲಿನ್ಯ, ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಸುಪ್ರೀಂ ಕೋರ್ಟ್‌ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಇದರ ಆಧಾರದ ಮೇಲೆ ಸರ್ಕಾರ ನ.1 ರಿಂದ 10 ರವರೆಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಮಾರಾಟದ ಮೇಲೆ ನಿಗಾ ಇರಿಸಲು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡಗಳನ್ನು ರಚಿಸಲಿದೆ. ಪಟಾಕಿ ಮಾರಾಟಕ್ಕೆ ಪರವಾನಗಿ ಬಯಸಿ ಈಗಾಗಲೇ ಅನೇಕ ವ್ಯಾಪಾರಿಗಳು ಪಾಲಿಕೆಗೆ ಎಡತಾಕುತ್ತಿದ್ದಾರೆ.

‘ಅರ್ಜಿಗಳನ್ನು ಪರಿಶೀಲಿಸಿ, ಪರವಾನಗಿ ನೀಡಲಾಗುತ್ತಿದೆ. ಈ ಬಾರಿಯೂ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಳಿಗೆಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಪಟಾಕಿ ಉತ್ಪಾದಕರಿಂದ ಹಸಿರು ಪಟಾಕಿ ಖರೀದಿಗೆ ಸಂಬಂಧಿಸಿದ ಪ್ರಮಾಣಪತ್ರ ಪಡೆದುಕೊಂಡು ಬಂದರೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.

‘ಪಟಾಕಿ ಮಾರಾಟದ ಮೇಲೆ ನಿಗಾ ವಹಿಸಲು ತಂಡಗಳನ್ನು ರಚಿಸಲಾಗುತ್ತಿದೆ. ತಂಡದಲ್ಲಿಯ ಅಧಿಕಾರಿಗಳು ಅಂಗಡಿಗಳು, ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರಾಟ ಮಾಡುವುದು ಕಂಡುಬಂದರೆ ಅವರಿಗೆ ದಂಡ ವಿಧಿಸುವುದು, ಪರವಾನಗಿ ರದ್ದು ಮಾಡುವ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.

ADVERTISEMENT

ಪಟಾಕಿ ಮಾರಾಟ ಮಳಿಗೆಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಅಂಗಡಿಗಳಲ್ಲಿ ಪರವಾನಗಿ ಪ್ರದರ್ಶಿಸಬೇಕು. ಅಂಗಡಿಗಳು ಜನ ವಸತಿ ಪ್ರದೇಶಗಳಿಂದ ದೂರ ಇರಬೇಕು. ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮಾಲಿನ್ಯ ಮಾಪನಕ್ಕೆ ಯಂತ್ರ ಅಳವಡಿಕೆ: ‘ಕಚೇರಿ ಆವರಣದಲ್ಲಿ ಮಾಲಿನ್ಯ ದಾಖಲೀಕರಣಕ್ಕೆ ಯಂತ್ರ ಅಳವಡಿಸಲಾಗಿದೆ. ಪ್ರತಿದಿನ ನಿಗಾ ವಹಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ದೀಪಾವಳಿ ಸಂದರ್ಭದಲ್ಲಿ ಮಾತ್ರ 1 ರಿಂದ 2 ಎಂ.ಎಂ ಹೆಚ್ಚಾಗುತ್ತಿದೆ. 125 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟು ಮಾಡುವ ಪಟಾಕಿಗಳಿಂದ ಹಾನಿ ಉಂಟಾಗುತ್ತದೆ. ಆದ್ದರಿಂದ ಹಸಿರು ಪಟಾಕಿ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಪ್ರಮಾಣ ಕಡಿಮೆ ಇರುತ್ತದೆ. ಮಾಲಿನ್ಯಕ್ಕೆ ಕಾರಣವಾಗುವ ಸಲ್ಫರ್‌, ಪಾಸ್ಫರಸ್, ನೈಟ್ರೇಟ್‌ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರ ಬಳಕೆಯಿಂದ ಪರಿಸರ ಮಾಲಿನ್ಯ ಕೊಂಚ ತಗ್ಗಲಿದೆ’ ಎಂಬುದು ಅಧಿಕಾರಿಗಳ ಹೇಳಿಕೆ.

*

ಪಟಾಕಿ ಸಿಡಿಸುವಾಗ ಇರಲಿ ಎಚ್ಚರಿ

* ಪಟಾಕಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಡಬೇಕು

* ಮದ್ಯ ಸೇವಿಸಿ ಪಟಾಕಿ ಸಿಡಿಸಲು ಮುಂದಾಗದಿರಿ

* ಆದಷ್ಟು ಹತ್ತಿ ಬಟ್ಟೆ ಧರಿಸಿಕೊಳ್ಳಿ

* ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಇಟ್ಟುಕೊಳ್ಳಿ

* ಸಾರ್ವಜನಿಕ ಸ್ಥಳ, ಆಸ್ಪತ್ರೆ, ವೃದ್ಧಾಶ್ರಮ, ಜನನಿಬಿಡ ಪ್ರದೇಶದಲ್ಲಿ ಪಟಾಕಿ ಸಿಡಿಸಬೇಡಿ

* ಸ್ಯಾನಿಟೈಸರ್ ಹಾಕಿಕೊಂಡು ದೀಪ, ಪಟಾಕಿ ಹಚ್ಚಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.