ADVERTISEMENT

ಕಾಡುಪ್ರಾಣಿಗಳಿಗೆ ಟ್ಯಾಂಕರ್‌ ನೀರು

ಕುಂಚಾವರಂ ವನ್ಯಜೀವಿಧಾಮದಲ್ಲಿ ಜೀವಜಲ ಕೊರತೆ

ಜಗನ್ನಾಥ ಡಿ.ಶೇರಿಕಾರ
Published 25 ಮಾರ್ಚ್ 2019, 20:34 IST
Last Updated 25 ಮಾರ್ಚ್ 2019, 20:34 IST
ಚಿಂಚೋಳಿ ತಾಲ್ಲೂಕು ಕುಂಚಾವರಂ ವನ್ಯಜೀವಿಧಾಮದಲ್ಲಿ ನಿರ್ಮಿಸಿರುವ ಹೊಂಡದಲ್ಲಿರುವ ನೀರನ್ನು ಜಿಂಕೆ ಮರಿ ಕುಡಿಯುತ್ತಿರುವುದು
ಚಿಂಚೋಳಿ ತಾಲ್ಲೂಕು ಕುಂಚಾವರಂ ವನ್ಯಜೀವಿಧಾಮದಲ್ಲಿ ನಿರ್ಮಿಸಿರುವ ಹೊಂಡದಲ್ಲಿರುವ ನೀರನ್ನು ಜಿಂಕೆ ಮರಿ ಕುಡಿಯುತ್ತಿರುವುದು   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಪ್ರಸಕ್ತ ವರ್ಷ ಮಳೆಯ ಅಭಾವದಿಂದಾಗಿ ತಾಲ್ಲೂಕಿನ ಕುಂಚಾವರಂ ಅರಣ್ಯ (ಚಿಂಚೋಳಿ ವನ್ಯಜೀವಿ ಧಾಮ)ದಲ್ಲೂ ನೀರಿನ ಅಭಾವ ಎದುರಾಗಿದೆ.

ಇದನ್ನು ನಿಭಾಯಿಸಲು ವನ್ಯಜೀವಿಧಾಮದ ಅಧಿಕಾರಿಗಳು ವಿವಿಧೆಡೆ ಸಿಮೆಂಟ್‌ ಕಾಂಕ್ರೀಟ್‌ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿದ್ದಾರೆ.

ಬಿರು ಬೇಸಿಗೆ ಕಾರಣ ಕಾಡುಪ್ರಾಣಿಗಳು ಹಗಲಿನಲ್ಲಿ ಮರಗಳ ನೆರಳಿನಲ್ಲಿ, ಕಲ್ಲು ಬಂಡೆಗಳಗಳ ಮರೆಯಲ್ಲಿ, ಗುಹೆಗಳಲ್ಲಿ, ಗಿಡಗಂಟಿಗಳ ಪೊದೆಯಲ್ಲಿ ಅವಿತುಕೊಂಡು ಕಾಲ ಕಳೆದರೆ ಸೂರ್ಯ ಮುಳುಗುತ್ತಿದ್ದಂತೆ ಹೊರ ಬಂದು ಆಹಾರ ಮತ್ತು ನೀರು ಅರಸುತ್ತಿವೆ.

ADVERTISEMENT

ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಮತ್ತು ಬಿಸಿಲು ನಾಡಿನಲ್ಲಿ ಅಪರೂಪ ಎನ್ನಬಹುದಾದ ಪ್ರಾಣಿಗಳು ಇಲ್ಲಿ ನೆಲೆ ಕಂಡುಕೊಂಡಿದ್ದು ವಿಶೇಷ. ಇಲ್ಲಿ ಆಗಾಗ ಚಿರತೆ ಕಾಣಿಸಿದರೂ ಅದು ಈ ವರೆಗೆ ಯಾರಿಗೂ ತೊಂದರೆ ನೀಡಿದ ವರದಿಗಳಿಲ್ಲ.

‘ಚಿಂಚೋಳಿ ವನ್ಯಜೀವಿಧಾಮವು ನೆರೆಯ ತೆಲಂಗಾಣದ ಅರಣ್ಯದ ಗಡಿಗೆ ಹೊಂದಿಕೊಂಡಿದೆ. ಅಲ್ಲಿನ ಅಧಿಕಾರಿಗಳು ಅರಣ್ಯ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸದಿರುವುದರಿಂದ ಅಲ್ಲಿ ಕಾಡು ವಿನಾಶದ ಅಂಚಿಗೆ ತಲುಪಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗುತ್ತಿದೆ. ಆದರೆ ಕರ್ನಾಟಕದ ಅಧಿಕಾರಿಗಳ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಅರಣ್ಯಕ್ಕೆ ಯಾವುದೇ ಕಂಟಕಗಳಿಲ್ಲ‘ ಎನ್ನುತ್ತವೆ ಮೂಲಗಳು.

‘ತೆಲಂಗಾಣ ಭಾಗದ ಕಾಡನ್ನು ಅಲ್ಲಿನ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿ ಕಾಪಾಡಬೇಕು. ಇದಾಗದಿದ್ದರೆ ಆ ಅರಣ್ಯವನ್ನು ವನ್ಯಜೀವಿಧಾಮಕ್ಕೆ ಸೇರಿಸಬೇಕು. ಇದರಿಂದ ವನ್ಯಜೀವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾಡು ಮತ್ತಷ್ಟು ದಟ್ಟವಾಗುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತವೆ ರಾಜ್ಯ ಅರಣ್ಯ ಇಲಾಖೆಯ ಮೂಲಗಳು.

ಕಾಡಿನಲ್ಲಿರುವ ಪ್ರಾಣಿಗಳು

ಚಿರತೆ, ಕತ್ತೆ ಕಿರುಬ, ತೋಳ, ನರಿ, ಮೊಲ, ಮುಂಗುಸಿ, ಹಾವು, ಕೋತಿ, ಕಾಡು ಹಂದಿ, ಮುಳ್ಳು ಹಂದಿ, ನೀಲಗಾಯ್‌, ಕಾಡು ಕುರಿ, ಕೃಷ್ಣ ಮೃಗ, ನವಿಲು.

***

ಧಾಮದ ಒಂಬತ್ತು ಕಡೆಗಳಲ್ಲಿ ಕಾಂಕ್ರೀಟ್‌ ತೊಟ್ಟಿ ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಕಾಡು<br/>ಪ್ರಾಣಿಗಳು ನೀರು ಕುಡಿಯುತ್ತಿವೆ. ನೀರಿಲ್ಲದೆ ಪ್ರಾಣಿಗಳು ಸಾವನ್ನಪ್ಪಿಲ್ಲ

–ವಾನತಿ ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.