ಕಲಬುರಗಿ: ಸಾವಿರಾರು ಶಿಕ್ಷಕರ ಹುದ್ದೆಗಳ ಕೊರತೆಯ ನಡುವೆಯೂ ಕಲ್ಯಾಣ ಕರ್ನಾಟಕ ಭಾಗದ ಪ್ರೌಢಶಾಲೆಯ ಕೆಲವು ಶಿಕ್ಷಕರು ಶಿಕ್ಷಣ ಇಲಾಖೆಯ ಡಯಟ್ ಕೇಂದ್ರ ಸೇರಿ ಇತರೆಡೆಗಳಲ್ಲಿನ ಬೋಧಕೇತರ ಹುದ್ದೆಗಳಿಗೆ ವರ್ಗವಾಗಿ ಹೋಗುತ್ತಿದ್ದಾರೆ. ಇದರಿಂದ ಶಾಲೆಗಳಲ್ಲಿ ಉಳಿಯುವ ಉಳಿದ ಶಿಕ್ಷಕರಲ್ಲಿ ಕಾರ್ಯಭಾರ ಹೆಚ್ಚಾಗುವ ಆತಂಕ ಶುರುವಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಪ್ರೌಢಶಾಲಾ ಸಹ ಶಿಕ್ಷಕ ವೃಂದದ ಸಿಬ್ಬಂದಿಯ ವರ್ಗಾವಣೆಯ ಆದೇಶವೊಂದನ್ನು ಕಲಬುರಗಿ ವಿಭಾಗ ಸೇರಿದಂತೆ ಎಲ್ಲ ಹೆಚ್ಚುವರಿ ಆಯುಕ್ತರುಗಳಿಗೆ ಕಳುಹಿಸಿದೆ. ಆದೇಶ ಪಟ್ಟಿಯಲ್ಲಿನ ಶಿಕ್ಷಕರನ್ನು ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿ, ತಮ್ಮ ಹಂತದಲ್ಲಿಯೇ ವರ್ಗಾವಣೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.
ವರ್ಗಾವಣೆಯ ಪಟ್ಟಿಯಲ್ಲಿರುವ ಸಹ ಶಿಕ್ಷಕರು ಬೋಧಕೇತರ ಹುದ್ದೆಗಳನ್ನು ಬಯಸಿ ನಗರ, ತಾಲ್ಲೂಕು ಕೇಂದ್ರಗಳಲ್ಲಿನ ಕಚೇರಿಗಳಲ್ಲಿನ ಖಾಲಿ ಇರುವ ಹುದ್ದೆಗಳಿಗೆ ತೆರಳುವರು. ಅವರಿಂದ ತೆರವಾದ ಬೋಧನಾ ವಿಷಯಗಳ, ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಹೊರೆಗಳ ಒತ್ತಡ ಉಳಿದ ಶಿಕ್ಷಕರ ಮೇಲೆ ಬೀಳುತ್ತಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (ಡಯಟ್) ಕಾರ್ಯಾನುಭವ ಶಿಕ್ಷಕರು, ಗ್ರಂಥಪಾಲಕರು, ತಾಂತ್ರಿಕ ಸಹಾಯಕರು, ಕಾರ್ಯಕ್ರಮ ಸಹಾಯಕರು, ಅಂಕಿಸಂಖ್ಯಾ ಸಹಾಯಕರು, ಯೋಜನಾ ಸಹಾಯಕರು, ಇಎಲ್‌ಟಿಸಿ ಭೋದಕರು, ವೃತ್ತಿ ಶಿಕ್ಷರಂತಹ ಹಲವು ಹುದ್ದೆಗಳಿಗೆ ಹೋಗುತ್ತಾರೆ.
ಪ್ರತಿ ಡಯಟ್‌ನಲ್ಲಿ 5ರಿಂದ 10 ಶಿಕ್ಷಕರು: ‘ಕಲಬುರಗಿ ವಿಭಾಗದಲ್ಲಿ ಆರು ಡಯಟ್ ಕೇಂದ್ರಗಳಿವೆ. ಪ್ರತಿ ಡಯಟ್ ಕೇಂದ್ರದ ವ್ಯಾಪ್ತಿಯಲ್ಲಿ 5ರಿಂದ 10 ಶಿಕ್ಷಕರು ಬೋಧಕೇತರ ಹುದ್ದೆಗಳಿಗೆ ವರ್ಗಾವಣೆ ಬಯಸಿದ್ದಾರೆ. ಕನಿಷ್ಠ 7 ಜನ ಶಿಕ್ಷಕರು ಎಂದುಕೊಂಡರು 47 ಶಿಕ್ಷಕರು ಬೋಧನೆಯಿಂದ ಹಿಮ್ಮುಖರಾಗುವರು’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.
ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಪ್ರೌಢಶಾಲೆಗಳಿಗೆ 11,793 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 7,686 ಹುದ್ದೆಗಳು ಕಾರ್ಯನಿರತವಾಗಿದ್ದು, 4,107 ಹುದ್ದೆಗಳು ಖಾಲಿ ಇವೆ. ಈಗ ಮತ್ತಷ್ಟು ಶಿಕ್ಷಕರು ಬೋಧನೆಯಿಂದ ದೂರಾದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಾಗೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧಿಕಾರಿಗಳ ಆತಂಕ.
‘ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಫಲಿತಾಂಶ ಬಂದರೆ ಬಡ್ತಿ ಕಡಿತ ಮಾಡಿ, ನೋಟಿಸ್ ಕೊಡುವುದಾಗಿ ಪ್ರೌಢಶಾಲೆಯ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಹಾಗೂ ಬಿಸಿಯೂಟದಂತಹ ಕಾರ್ಯಗಳ ಒತ್ತಡದಿಂದ ಮುಕ್ತರಾಗಲು ಕೆಲವರು ತಮ್ಮ ಪ್ರಭಾವವನ್ನು ಬಳಸಿಕೊಂಡು, ಬೆಂಗಳೂರಿಗೆ ತೆರಳಿ ಬೋಧಕೇತರ ಹುದ್ದೆಗಳತ್ತ ಮುಖ ಮಾಡಿದ್ದಾರೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರು.
‘ಬೋಧಕೇತರ ಜತೆಗೆ ಬೋಧನಾ ಕೆಲಸವೂ ಮಾಡಬೇಕು’
‘ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಬೋಧಕೇತರ ಹುದ್ದೆಗಳಿಗೆ ಹೋದವರಿಗೆ ಮುಕ್ತವಾಗಿ ಬಿಡುವುದಿಲ್ಲ. ಬೋಧಕೇತರ ಕೆಲಸದ ಜೊತೆಗೆ ವಾರದಲ್ಲಿ ಕೆಲ ದಿನಗಳು ಶಾಲೆಗಳಲ್ಲಿ ಬೋಧನೆಯೂ ಮಾಡವಂತೆ ಸೂಚಿಸಲಾಗುವುದು’ ಎಂದು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೋಧಕೇತರ ಸಿಬ್ಬಂದಿಯನ್ನು ನಾವು ವರ್ಗವಣೆ ಮಾಡುತ್ತೇವೆ. ಆದರೆ ಬೋಧಕರು ಜನರಲ್ ಕೌನ್ಸಿಲಿಂಗ್ ಮೂಲಕ ವರ್ಗವಾಗುತ್ತಾರೆ. ಯಾವುದೇ ಬೋಧಕರು ಯಾವುದೇ ಕಚೇರಿಗಳಲ್ಲಿ ಇದ್ದರೂ ಅವರಿಗೊಂದು ಶಾಲೆಯನ್ನು ಗೊತ್ತುಪಡಿಸುತ್ತೇವೆ. ಮುಖ್ಯಶಿಕ್ಷಕರು ಇಲ್ಲದ ಶಾಲೆಗಳ ಜವಾಬ್ದಾರಿಯನ್ನು ಸಹ ಕೊಡಲಾಗುವುದು’ ಎಂದರು.
21 ಮುಖ್ಯಶಿಕ್ಷಕರು ಡಯಟ್‌ಗೆ ವರ್ಗ
ರಾಜ್ಯದಾದ್ಯಂತ ಪ್ರೌಢಶಾಲೆಗಳ 46 ಮುಖ್ಯಶಿಕ್ಷಕರನ್ನು ಡಯಟ್ ಕೇಂದ್ರಗಳಲ್ಲಿನ ಖಾಲಿ ಇರುವ ಉಪನ್ಯಾಸಕ ಹಾಗೂ ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ವರ್ಗವಾಗಿದ್ದಾರೆ. 46ರಲ್ಲಿ 21 ಮುಖ್ಯಶಿಕ್ಷಕರು ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಂದ ತೆರಳಿದ್ದಾರೆ. ಸಹಜವಾಗಿ ಉಳಿದರುವ ಶಿಕ್ಷಕರ ಮೇಲೆ ಕಲಿಕೆಯ ಜತೆಗೆ ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಹೊರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.