ಕಲಬುರ್ಗಿ: ‘ಅತಿಥಿ ಶಿಕ್ಷಕಿಗೂ ಪರಿಹಾರ ಪ್ಯಾಕೇಜ್ ಘೋಷಿಸಬೇಕು. 14 ತಿಂಗಳ ವೇತನ ಬಿಡುಗಡೆ ಮಾಡಬೇಕು. ಕೋವಿಡ್ ಪ್ಯಾಕೇಜ್ ಘೋಷಿಸಬೇಕು. ಪಿಎಫ್ ಮತ್ತು ಇಎಸ್ಐ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅತಿಥಿ ಶಿಕ್ಷಕರ ಹೋರಾಟ ಸಮಿತಿ ನೇತೃತ್ವದಲ್ಲಿ ಭಾನುವಾರ ಜಿಲ್ಲೆಯ ವಾಡಿ ಪಟ್ಟಣ ಸೇರಿದಂತೆ ವಿವಿಧೆಡೆ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಆನ್‌ಲೈನ್ ಆಂದೋಲನ ನಡೆಸಿದರು.
‘ಕೊರೊನಾ ಲಾಕ್‌ಡೌನ್ ಸಂಕಷ್ಟದಲ್ಲಿರುವ ಅತಿಥಿ ಶಿಕ್ಷಕರನ್ನು ಸರ್ಕಾರ ಸಂಪೂರ್ಣ ಮರೆತಿದೆ. ಕೋವಿಡ್ ಪರಿಹಾರ ಘೋಷಣೆಯಲ್ಲಿ ನಮ್ಮನ್ನು ಕೈಬಿಡುವ ಮೂಲಕ ಸರ್ಕಾರವೇ ನಮ್ಮ ತಿಥಿ ನೆರವೇರಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಭದ್ರತೆ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಉನ್ನತ ಹಂತದ ಹೋರಾಟ ಹಮ್ಮಿಕೊಳ್ಳುವುದಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಮುಖಂಡ ಯೇಸಪ್ಪಾ ಕೇದಾರ ಎಚ್ಚರಿಕೆ ನೀಡಿದರು.
ಅತಿಥಿ ಶಿಕ್ಷಕರಾದ ಸೀತಾಬಾಯಿ ಎಂ. ಹೇರೂರ, ಶ್ರೀದೇವಿ ಎಸ್.ಮಲಕಂಡಿ, ಶಿವಾನಂದ ಪೂಜಾರಿ, ಸೋಮಶೇಖರ ಗೌಡ, ಕವಿತಾ ಸುನೀಲ ರಾಠೋಡ, ನಾಗರತ್ನ ಪ್ರಕಾಶ ಹಡಪದ, ನೀಲಮ್ಮ ದುರ್ಗದ, ಶೋಭಾ ಮ್ಯಾಗೇರಿ, ಅಣ್ಣೆಮ್ಮಾ ಕುಂಬಾರ ಸೇರಿದಂತೆ ಅನೇಕ ಶಿಕ್ಷಕರು ಆನ್‌ಲೈನ್ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.