ಕಲಬುರಗಿ/ವಿಜಯಪುರ: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗ ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಉಷ್ಣಾಂಶ ತೀವ್ರ ಏರಿಕೆ ಕಂಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಐನಾಪುರದಲ್ಲಿ ಕಂಡುಬಂದಿದ್ದು, ಕಲ್ಯಾಣ ಕರ್ನಾಟಕದಾದ್ಯಂತ 41 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಬೆಳಿಗ್ಗೆ 8ರಿಂದಲೇ ಬಿಸಿಲಿನ ಅನುಭವ ಆರಂಭವಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಪ್ರಖರತೆ ಹೆಚ್ಚಾಗುತ್ತಿದೆ. ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.
ರಾಯಚೂರಿನಲ್ಲಿ 41.9, ಯಾದಗಿರಿಯಲ್ಲಿ 41.8, ಕೊಪ್ಪಳದಲ್ಲಿ 41.7, ಬಳ್ಳಾರಿಯಲ್ಲಿ 41.4 ಮತ್ತು ಬೀದರ್‌ನಲ್ಲಿ 41.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದರೆ, ವಿಜಯಪುರದಲ್ಲಿ 41.8, ಬಾಗಲಕೋಟೆಯಲ್ಲಿ 40.4, ಉತ್ತರ ಕನ್ನಡ ಜಿಲ್ಲೆಯಲ್ಲಿ 40.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮಾರ್ಚ್ 17ರವರೆಗೆ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಮಾ.18 ಮತ್ತು 19ರಂದು ಶಾಖದ ಅಲೆಗಳ (ಹೀಟ್ ವೇವ್) ಸಾಧ್ಯತೆಯೂ ಇದ್ದು, ಸಾರ್ವಜನಿಕರು ಮಧ್ಯಾಹ್ನ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.