ADVERTISEMENT

ರಹಸ್ಯ ಕ್ಯಾಮೆರಾದಿಂದಾಗಿ ಸಿಕ್ಕಿಬಿದ್ದ ಆರೋಪಿ

ಅಮಾವಾಸ್ಯೆಗೆ ಕದ್ದ ಮೂರ್ತಿ ಹುಣ್ಣಿಮೆಗೆ ತಂದಿಡುತ್ತಿದ್ದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 20:49 IST
Last Updated 29 ಮಾರ್ಚ್ 2024, 20:49 IST
ಬಸವರಾಜ್‌ ಕೋರಿ
ಬಸವರಾಜ್‌ ಕೋರಿ   

ಶಹಾಬಾದ್‌ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮುತಗಾ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಅಮಾವಾಸ್ಯೆ ಸಂದರ್ಭದಲ್ಲಿ ಮೂರ್ತಿ ಕದ್ದು ಹುಣ್ಣಿಮೆ ದಿನ ವಾಪಸ್‌ ತಂದಿಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈ ಸಂಬಂಧ ಹಸಿರು ಸೇನೆ (ಚೊನಪ್ಪ ಪೂಜಾರಿ ಬಣ) ರಾಜ್ಯ ಕಾರ್ಯದರ್ಶಿ ಬಸವರಾಜ್ ಕೋರಿ ಅವರನ್ನು ಬಂಧಿಸಿದ್ದಾರೆ.

ದೇವಸ್ಥಾನದ ಗದ್ದುಗೆಯಲ್ಲಿದ್ದ ಬಸವಣ್ಣನ ಮೂರ್ತಿ ಮತ್ತು ಪಲ್ಲಕ್ಕಿಯಲ್ಲಿದ್ದ ಬಸವೇಶ್ವರರ ಮೂರ್ತಿಯನ್ನು ಅಮಾವಾಸ್ಯೆಯ ಒಂದು ದಿನ ಮುಂಚಿತವಾಗಿ ಬಸವರಾಜ್ ಕೋರಿ ಕಳವು ಮಾಡುತ್ತಿದ್ದ. ನಂತರ ಹುಣ್ಣಿಮೆಯ ದಿನ ಅದನ್ನು ವಾಪಸ್‌ ತಂದು ಇಡುತ್ತಿದ್ದ. ಈ ರೀತಿ ಮೂರು ಬಾರಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಫೆ. 9ರಂದು ಮೂರನೇ ಬಾರಿ ಮೂರ್ತಿ ಕಳವು ಮಾಡಿದ್ದಾಗ ಅದನ್ನು ವಿರೂಪಗೊಳಿಸಲಾಗಿತ್ತು. ಈ ಬಗ್ಗೆ ಬಸವರಾಜ್‌ ಕೋರಿ ಅವರೇ ದೂರನ್ನೂ ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲೂ ಬಸವರಾಜ್‌ ಜೊತೆಗೆ ಇದ್ದು, ಅನುಮಾನ ಬಾರದಂತೆ ಇರುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಹಸ್ಯವಾಗಿ ಕ್ಯಾಮೆರಾ ಅಳವಡಿಸಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿ ಬಸವರಾಜ್‌ ಅವರನ್ನು ಬಂಧಿಸಿದ್ದಾರೆ.

ADVERTISEMENT

‘ದೇವಸ್ಥಾನದ ಟ್ರಸ್ಟಿನ ಹೆಸರಿನಲ್ಲಿ ಸುಮಾರು 35 ಎಕರೆ ಜಮೀನು ಮತ್ತು ಇತರೆ ಆಸ್ತಿ ಇದೆ. ಟ್ರಸ್ಟ್‌ನಲ್ಲಿ ತಾನೂ ಸೇರಿಕೊಳ್ಳಬೇಕು ಎಂಬ ಕಾರಣಕ್ಕೆ ಬಸವರಾಜ್‌ ಈ ಕೃತ್ಯ ಎಸಗಿದ್ದಾನೆ’ ಎಂದು ಡಿವೈಎಸ್ಪಿ ಶಂಕರ್‌ಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಸಿಪಿಐ ನಟರಾಜ ಲಾಡೆ, ಎಸ್ಐ ಗುಂಡಪ್ಪ, ದೊಡ್ಡಪ್ಪಗೌಡ, ಸಿದ್ದು ಒಡೆಯರ್, ಶ್ರೀಕಾಂತ್ ರಾಠೋಡ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.