ADVERTISEMENT

ಫಿರೋಜಾಬಾದ್‌: ದಶಕ ಕಳೆದಿದೆ, ಭೀಮಾ ಪ್ರವಾಹದ ಸಂತ್ರಸ್ತರ ಬದುಕು ಪರಿತಪಿಸುವಂತಿದೆ

ಫಿರೋಜಾಬಾದ್‌ ಹೊಸ ಪುನರ್ವಸತಿ ಪ್ರದೇಶದಲ್ಲಿ ಇಲ್ಲ ಕನಿಷ್ಠ ಸೌಕರ್ಯ

ಸಂತೋಷ ಈ.ಚಿನಗುಡಿ
Published 21 ಜುಲೈ 2021, 4:16 IST
Last Updated 21 ಜುಲೈ 2021, 4:16 IST
ಕಲಬುರ್ಗಿ ತಾಲ್ಲೂಕಿನ ಫಿರೋಜಾಬಾದ್‌ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ಪುನರ್ವಸತಿ ಪ್ರದೇಶದ ನೋಟ
ಕಲಬುರ್ಗಿ ತಾಲ್ಲೂಕಿನ ಫಿರೋಜಾಬಾದ್‌ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ಪುನರ್ವಸತಿ ಪ್ರದೇಶದ ನೋಟ   

ಕಲಬುರ್ಗಿ: ತಾಲ್ಲೂಕಿನ ಫಿರೋಜಾಬಾದ್‌ ಹೊಸ ಗ್ರಾಮ ನಿರ್ಮಾಣವಾಗಿ ದಶಕ ಕಳೆದಿದೆ. ಆದರೂ ಸಂತ್ರಸ್ತರ ಜೀವನೋಪಾಯಕ್ಕೆ ಬೇಕಾದ ಕನಿಷ್ಠ ಸೌಕರ್ಯಗಳನ್ನು ನೀಡುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ.

ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ವಾದ ಫಿರೋಜಾಬಾದ್ ಗ್ರಾಮವು ವಾಣಿಜ್ಯ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದಿದೆ. 2010ರಲ್ಲಿ ಭೀಮಾ ನದಿ ನೀರಿನ ಪ್ರವಾಹ ಉಕ್ಕೇರಿ ಇಲ್ಲಿನ ಹಲವು ಮನೆ, ಹೊಲಗಳು ಮುಳುಗಿದವು. ತೀವ್ರ ಸಂಕಷ್ಟಕ್ಕೆ ಸಿಲುಕಿದ 108 ಕುಟುಂಬಗಳಿಗೆ ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಸಂತ್ರಸ್ತ ಕುಟುಂಬಗಳು 2011ರಲ್ಲಿ ಇಲ್ಲಿಗೆ ಬಂದು ವಾಸಿಸುತ್ತಿವೆ. ಆದರೆ, ಕನಿಷ್ಠ ಸೌಕರ್ಯಗಳಿಗೆ ಪರದಾಟ ತಪ್ಪಿಲ್ಲ.

30X50 ಅಳತೆಯ ಜಾಗದಲ್ಲಿ ಎರಡು ರೂಮ್‌ಗಳನ್ನು ಹೊಂ ದಿದ 108 ಮನೆಗಳನ್ನು ಇಲ್ಲಿ ನಿರ್ಮಿಸ ಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಕಟ್ಟಲಾಗಿದೆ. ಆದರೆ, ನೀರು ಸಂಪರ್ಕವಿಲ್ಲದ ಕಾರಣ ಅವು ಬಳಕೆಯಾಗದೆ ಪಾಳುಬಿದ್ದಿವೆ. ಜನ ಅನಿವಾರ್ಯವಾಗಿ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ADVERTISEMENT

ಮನೆಗಳ ನಿರ್ಮಾಣಕ್ಕೂ ಮುನ್ನ ರಸ್ತೆ ನಿರ್ಮಿಸಿ, ಡಾಂಬರ್‌ ಹಾಕಲಾಗಿತ್ತು. ಎರಡೇ ವರ್ಷದಲ್ಲಿ ಅದು ಕಿತ್ತುಹೋಗಿದೆ. ಇಲ್ಲಿರುವ 8 ಚಿಕ್ಕಚಿಕ್ಕ ರಸ್ತೆಗಳು ಈಗ ಕೆಸರುಗದ್ದೆಯಂತಾಗಿವೆ. ಕೇವಲ 10 ಅಡಿ ಅಗಲದ ರಸ್ತೆಯಲ್ಲಿ ಕಿರಿದಾದ ಚರಂಡಿಗಳನ್ನು ನಿರ್ಮಿಸಿದ್ದು, ಚರಂಡಿ ಹಾಗೂ ಮಳೆ ನೀರು ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ಮಲಿನ ನೀರು ಎಲ್ಲೆಂದರಲ್ಲಿ ಕಟ್ಟಿಕೊಂಡಿದ್ದು, ಸೊಳ್ಳೆ– ಕ್ರಿಮಿಗಳ ಆವಾಸ ಸ್ಥಾನವಾಗಿದೆ.

ವಿದ್ಯುತ್‌, ನೀರಿಗೂ ತತ್ವಾರ: ಈ ಪುನರ್ವಸತಿಗೆ ಇದೂವರೆಗೂ ಒಂದು ಪ್ರತ್ಯೇಕ ಹೆಸರು ಇಟ್ಟಿಲ್ಲ. ರೂಢಿಯಂತೆ ಹೊಸ ಊರು ಎಂದು ಕರೆಯಲಾಗುತ್ತಿದೆ. ಆರಂಭದಿಂದಲೂ ಇಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ಲ. ಪ್ರತಿ ರಾತ್ರಿಯನ್ನೂ ಜನರು ಆತಂಕದಲ್ಲಿ ಕಳೆಯುವಂತಾಗಿದೆ. ಸುತ್ತಲಿನ ಪ್ರದೇಶ ಮುಳ್ಳುಗಂಟಿಗಳಿಂದ ಕೂಡಿದ್ದರಿಂದ ಸರಿಸೃಪಗಳ ಹಾವಳಿಯೂ ಹೆಚ್ಚಾಗಿದೆ.

‌ಒಂದೇ ಒಂದು ಕೊಳವೆಬಾವಿ ಕೊರೆಸಿದ್ದು, ಅದು ತಗ್ಗು ಪ್ರದೇಶದ ಲ್ಲಿರುವ ಕಾರಣ ಪ್ರತಿ ಮಳೆಗಾಲದಲ್ಲೂ ನೀರಿನಲ್ಲಿ ಮುಳುಗುತ್ತದೆ. ಈ ಬಾರಿ ಕೂಡ ಜೂನ್‌ ಆರಂಭದಲ್ಲೇ ಪಂಪ್‌ಸೆಟ್‌ ಕೆಟ್ಟುಹೋಗಿದ್ದರೂ ದುರಸ್ತಿ ಮಾಡಿಸಿಲ್ಲ. ಗ್ರಾಮದಲ್ಲೇ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹಾಕಿಸಿದ ಬೋರ್‌ವೆಲ್‌ನಿಂದ ಎಲ್ಲರೂ ನೀರು ಸಂಗ್ರಹಿಸಬೇಕಾಗಿದೆ.

ಬೇಕಿದೆ ಅಂಗನವಾಡಿ ಕೇಂದ್ರ: ಫಿರೋಜಾಬಾದ್‌ನಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ. ಆದರೆ, ‌ಹೊಸ ಜನವಸತಿ ಪ್ರದೇಶದಲ್ಲಿ ಒಂದೂ ಕೇಂದ್ರವಿಲ್ಲ. ಇಲ್ಲಿನ ಮಕ್ಕಳು ನಾಲ್ಕು ಕಿ.ಮೀ ದೂರದ ಹಳೆಯ ಊರಿಗೆ ಹೋಗಬೇಕು. ಸದ್ಯ ಎಲ್ಲ ಅಂಗನವಾಡಿಗಳೂ ಬಂದ್‌ ಆಗಿದ್ದರಿಂದ ಮಕ್ಕಳು ದಿನವಿಡೀ ಕೆಸರಿನಲ್ಲಿ ಆಟವಾಡಿ ಕಾಲ ಕಳೆಯುವಂತಾಗಿದೆ.

ಹಳೆಯ ಊರಿನಲ್ಲಿ ಕೂಡ ಕುರುಬಗೇರಿಯಲ್ಲಿ ಇರಬೇಕಾದ ಅಂಗನವಾಡಿ ಕೇಂದ್ರವನ್ನು ಇನ್ನೊಂದು ಸ್ಥಳದಲ್ಲಿ ಕಟ್ಟಲಾಗಿದೆ. ಹಾಗಾಗಿ, ಈ ಪ್ರದೇಶದ ಮಕ್ಕಳನ್ನು ಕಳುಹಿಸಲು ತಾಯಂದಿರು ಮುಂದಾಗುತ್ತಿಲ್ಲ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಜಗದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.