ADVERTISEMENT

ಗ್ಯಾರೇಜ್‌ನಂತಾದ ಜೇವರ್ಗಿ ಪೊಲೀಸ್ ಠಾಣೆ

ತುಕ್ಕು ಹಿಡಿದ, ಸಕಾಲಕ್ಕೆ ವಿಲೇವಾರಿಯಾಗದ ಹಲವು ವಾಹನಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2025, 5:55 IST
Last Updated 25 ಮೇ 2025, 5:55 IST
ಜೇವರ್ಗಿ ಪೊಲೀಸ್ ಠಾಣೆಯ ಆವರಣದಲ್ಲಿ ತುಕ್ಕು ಹಿಡಿದ ದ್ವಿಚಕ್ರ ವಾಹನಗಳು
ಜೇವರ್ಗಿ ಪೊಲೀಸ್ ಠಾಣೆಯ ಆವರಣದಲ್ಲಿ ತುಕ್ಕು ಹಿಡಿದ ದ್ವಿಚಕ್ರ ವಾಹನಗಳು   

ಜೇವರ್ಗಿ: ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳು ಸಕಾಲಕ್ಕೆ ವಿಲೇವಾರಿಯಾಗದ ಕಾರಣ ಪಟ್ಟಣದ ಪೊಲೀಸ್ ಠಾಣೆಯ ಆವರಣ ದಿನೇ ದಿನೇ ಗುಜರಿ ವಾಹನಗಳ ದಾಸ್ತಾನು ಕೇಂದ್ರವಾಗುತ್ತಿದೆ. ಠಾಣೆಯ ಆವರಣದಲ್ಲಿ ಕಾಲಿಟ್ಟರೆ ಸಾಕು ಸಾಲಾಗಿ ನಿಂತು ಧೂಳು ತಿನ್ನುತ್ತ, ತುಕ್ಕು ಹಿಡಿಯುತ್ತಿರುವ ವಾಹನಗಳು ಗಮನ ಸೆಳೆಯುತ್ತವೆ.

ಇಲ್ಲಿ ಸ್ಥಳಾವಕಾಶ ವಿಶಾಲವಾಗಿರುವ ಕಾರಣಕ್ಕೆ ಎಲ್ಲಿ ನೋಡಿದರೂ ಬೈಕ್, ಆಟೊ, ಟಂಟಂ, ಕಾರು, ಲಾರಿ, ಟ್ರ್ಯಾಕ್ಟರ್, ಟೆಂಪೋ, ತಳ್ಳು ಬಂಡಿಗಳನ್ನು ನಿಲ್ಲಿಸಲಾಗಿದೆ.

ಪಟ್ಟಣದ ಮೂಲಕ ಬೀದರ್‌-ಶ್ರೀರಂಗಪಟ್ಟಣ ಹಾಗೂ ಹುಮನಾಬಾದ್‌-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಹೆದ್ದಾರಿಗಳ ಮೇಲೆ‌ ನಿತ್ಯ ಸಣ್ಣ ಪುಟ್ಟ ಅಪಘಾತ ಪ್ರಕರಣಗಳು ಜರುಗುವುದರಿಂದ ಅಪಘಾತಕ್ಕೀಡಾದ ವಾಹನಗಳು, ಜೂಜಾಟ, ಕಳ್ಳತನ, ಅಕ್ರಮ ಮರಳು ಸಾಗಣೆ, ಸಂಚಾರ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ನಿಯಮಾನುಸಾರ ಕಾಲಕಾಲಕ್ಕೆ ವಿಲೇವಾರಿ ಮಾಡಬೇಕು. ಕೆಲ ಪ್ರಕರಣಗಳಲ್ಲಿ ಮಾಲೀಕರಿಂದ ದಂಡ ಪಾವತಿಸಿಕೊಂಡು ವಾಹನಗಳನ್ನು ಹಸ್ತಾಂತರಿಸಬೇಕು. ಇನ್ನು ಕೆಲ ಪ್ರಕರಣಗಳಲ್ಲಿ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ಮೌಲ್ಯ ನಿಗದಿಪಡಿಸಬೇಕು. ಅಂತಹ ವಾಹನಗಳನ್ನು ಅಧಿಕಾರಿಗಳು ಹರಾಜಿನ ಮೂಲಕ ಮಾರಾಟ ಮಾಡಬೇಕು. ಆದರೆ, ಅನೇಕ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪಡೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಕೆಲವು ವಾಹನಗಳಿಗೆ ನೋಂದಣಿ ಇಲ್ಲ. ಹಲವು ವಾಹನಗಳ ಚಾಲಕರಿಗೆ ಹಾಗೂ ಮಾಲೀಕರಿಗೆ ಚಾಲನಾ ಪರವಾನಗಿ, ವಿಮೆ ಇಲ್ಲ. ಹೀಗಾಗಿ, ವಾಹನಗಳನ್ನು ವಾಪಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಹೊತ್ತಿಗೆ ಜಪ್ತಿ ಮಾಡಿದ ತುಕ್ಕಿನಿಂದ ತನ್ನ ಮೂಲ ಸ್ವರೂಪ ಕಳೆದುಕೊಂಡು ಬಳಸಲು ಬಾರದ ಸ್ಥಿತಿಗೆ ತಲುಪಿದ ಕಾರಣಕ್ಕೆ ಮಾಲೀಕರು ಅಂತಹ ವಾಹನ ಹಿಂಪಡೆಯುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಪ್ರಕರಣಗಳು ಇತ್ಯರ್ಥವಾಗದ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಾಹನಗಳನ್ನು‌ ನಿಯಮಾನುಸಾರ ಕಾಲಕಾಲಕ್ಕೆ ವಿಲೇವಾರಿ ಮಾಡಲಾಗುವುದು.
ರಾಜೇಸಾಬ ನದಾಫ್, ಸರ್ಕಲ್ ಇನ್‌ಸ್ಪೆಕ್ಟರ್ ಜೇವರ್ಗಿ

ಅನೇಕ ಪ್ರಕರಣಗಳಲ್ಲಿ ವಾಹನ ಕಳೆದುಕೊಂಡವರು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪೊಲೀಸರು ಹಗಲಿರುಳು ಶ್ರಮವಹಿಸಿ ಕಳುವಾದ ವಾಹನ ಹುಡುಕಿ ತಂದರೆ, ಕೆಲವು ಮಾಲೀಕರು ಠಾಣೆಯತ್ತಲೂ ಸುಳಿಯುವುದಿಲ್ಲ. ಹೀಗಾಗಿಯೂ ಸಾಕಷ್ಟು ವಾಹನಗಳು ಠಾಣೆಯ ಆವರಣದಲ್ಲೇ ಉಳಿದಿವೆ. 

ಜಪ್ತಿಯಾದ ವಾಹನಗಳ ಹರಾಜಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವರದಿ, ನ್ಯಾಯಾಲಯದ ಅನುಮತಿ ಬೇಕು. ಬಹುತೇಕ ಅಧಿಕಾರಿಗಳು ವಾಹನಗಳನ್ನು ಹರಾಜು ಪ್ರಕ್ರಿಯೆ ಬಗ್ಗೆ ಆಸಕ್ತಿ ತೋರುವುದಿಲ್ಲ. ಹೀಗಾಗಿ ಠಾಣೆಯ ಆವರಣದಲ್ಲಿ ತುಕ್ಕು ಹಿಡಿಯುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

‘ಕಳ್ಳರ ಪಾಲಾಗುವ ಬಿಡಿ ಭಾಗಗಳು’

‘ಜಪ್ತಿ ಅಪಘಾತಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಬಿಡಿಸಿಕೊಳ್ಳಬೇಕಾದರೆ ಪೊಲೀಸರು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ವಾಹನ ದಾಖಲೆ ಹೊಂದಿಸಲು ಓಡಾಟ ಪೊಲೀಸರ ಹಣದ ಬೇಡಿಕೆಗೆ ಬೇಸತ್ತು ಕೆಲವರು ಹಳೆಯ ವಾಹನಗಳನ್ನು ಮರೆತು ಹೊಸ ವಾಹನಗಳನ್ನು ಖರೀದಿಸುತ್ತಾರೆ. ಮಾಲೀಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ವಾಹನಗಳ ಬಿಡಿಭಾಗಗಳು ದಿನೇ ದಿನೇ ಕಳ್ಳರ ಪಾಲಾಗುವುದೇ ಹೆಚ್ಚು’ ಎಂದು ಸಾಮಾಜಿಕ ಹೋರಾಟಗಾರ ಈಶ್ವರ ಹಿಪ್ಪರಗಿ ಹೇಳುತ್ತಾರೆ.

ಹಾಳು ಬಿದ್ದ ಲಾರಿ ಟೆಂಪೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.