ADVERTISEMENT

ಕಲಬುರಗಿ | ಗುಡ್ಡೆ ಬಿದ್ದ ಕಸ; ಹೊಮ್ಮುತ್ತಿದೆ ದುರ್ನಾತ

ತ್ಯಾಜ್ಯ ವಿಲೇವಾರಿಗೂ ತಟ್ಟಿದ ಮಹಾನಗರ ಪಾಲಿಕೆ ನೌಕರರ ಮುಷ್ಕರದ ಬಿಸಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 7:20 IST
Last Updated 12 ಜುಲೈ 2025, 7:20 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ ಬಳಿ ಕಸದ ರಾಶಿಯ ನೋಟ –ಪ್ರಜಾವಾಣಿ ಚಿತ್ರಗಳು
ಕಲಬುರಗಿಯ ಸೂಪರ್‌ ಮಾರ್ಕೆಟ್‌ ಬಳಿ ಕಸದ ರಾಶಿಯ ನೋಟ –ಪ್ರಜಾವಾಣಿ ಚಿತ್ರಗಳು    

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ನಡೆಸುತ್ತಿರುವ ಮುಷ್ಕರದಿಂದ ಪಾಲಿಕೆಯ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಜೊತೆಗೆ ನೈರ್ಮಲ್ಯ ಚಟುವಟಿಕೆಗಳಿಗೂ ಬಿಸಿ ತಟ್ಟಿದೆ.

ಮುಷ್ಕರ ಮುಂದುವರಿದ ಪರಿಣಾಮ ಮನೆ–ಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ನಗರದ ಬಡಾವಣೆಗಳ ಬೀದಿಗಳಲ್ಲಿ ಕಾರ್ನರ್‌ಗಳಲ್ಲಿ ನಾಗರಿಕರು ಕಸ ಬಿಸಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ನಗರದ ಸೂಪರ್‌ ಮಾರ್ಕೆಟ್‌, ಚಪ್ಪಲ್ ಬಜಾರ್‌, ಕಪಡಾ ಬಜಾರ್‌, ಬಾಂಡೆ ಬಜಾರ್‌, ಪುಟಾಣಿ ಗಲ್ಲಿ ಸೇರಿದಂತೆ ಹಲವೆಡೆ ತ್ಯಾಜ್ಯಗಳ ಗುಡ್ಡೆ ಬಿದ್ದಿದೆ. ಆಗೀಗ ಸುರಿದ ತುಂತುರು ಮಳೆಗೆ ತ್ಯಾಜ್ಯವೆಲ್ಲ ಮತ್ತಷ್ಟು ಗಿಜಗುಡುತ್ತಿದ್ದು, ದುರ್ನಾತ ಬೀರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಸೂಪರ್‌ ಮಾರ್ಕೆಟ್‌ನಲ್ಲಂತೂ ಹಸಿ ಕಸ ತುಂತುರು ಮಳೆಯಿಂದ ಮತ್ತಷ್ಟು ಕೊಳೆಯುತ್ತಿದ್ದು, ಸಮಸ್ಯೆಯನ್ನು ಹೆಚ್ಚಿಸಿದೆ.

ADVERTISEMENT

‘ಮುಷ್ಕರದ ಫಲವಾಗಿ ಪೌರ ಕಾರ್ಮಿಕರು ಕಸ ಎತ್ತದ ಕಾರಣ ತ್ಯಾಜ್ಯ ವಿಲೇವಾರಿ ಆಗಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ದುರ್ನಾತ ಹೊಮ್ಮುತ್ತಿದೆ. ಪಾಲಿಕೆ ಅಧಿಕಾರಿಗಳು ಕಸ ವಿಲೇವಾರಿಗೆ ಕ್ರಮವಹಿಸಬೇಕು’ ಎಂದು ಸೂಪರ್‌ ಮಾರ್ಕೆಟ್‌ ಪ್ರದೇಶ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಕಲಬುರಗಿ ನಗರದ ಸರಾಫ್ ಬಜಾರ್‌ ಬಳಿ ಗುಡ್ಡೆ ಬಿದ್ದ ಕಸದ ರಾಶಿ
ಮುಷ್ಕರದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದು ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಕಸ ಸಂಗ್ರಹಕ್ಕೆ ಶನಿವಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು
ಅವಿನಾಶ ಶಿಂದೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ

ನಿಲ್ಲದ ಮುಷ್ಕರ; ನಮೋಶಿ ಬೆಂಬಲ

ಇತ್ತ ಕಲಬುರಗಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಮುಷ್ಕರ ಶುಕ್ರವಾರವೂ ಮುಂದುವರಿದಿತ್ತು. ‘ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ ಭೇಟಿ ನೀಡಿ ಪಾಲಿಕೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅದೇ ರೀತಿ ಜೆಡಿಎಸ್‌ ಪಕ್ಷದ ಮುಖಂಡರು ಕಾರ್ಯಕರ್ತರು ಸಮತಾ ಸೈನಿಕ ದಳದ ಮುಖಂಡರು ಗುಲಬರ್ಗಾ ಹೋಟೆಲ್‌ ಮಾಲೀಕರ ಸಂಘದ ಮುಖಂಡರು ಆಟೊ ರಿಕ್ಷಾ ಚಾಲಕರ ಸಂಘಟನೆಯವರು ಶುಕ್ರವಾರ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ’ ಎಂದು ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸುನೀಲ್‌ ವಂಟಿ ತಿಳಿಸಿದರು. ‘ನಮ್ಮ ಬೇಡಿಕೆಗಳ ಈಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆ. ಶುಕ್ರವಾರ ಬೆಂಗಳೂರಿನಲ್ಲಿ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆದಿದ್ದು ನಮ್ಮ ಬೇಡಿಕೆಗಳನ್ನು ಸಂಘದ ಅಧ್ಯಕ್ಷರು ಮಂಡಿಸಿದ್ದಾರೆ. ಜುಲೈ 15ರಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ ಅವರೊಂದಿಗೆ ಸಭೆ ನಡೆಯಲಿದ್ದು ಅಲ್ಲಿಯ ತನಕ ಮುಷ್ಕರ ಮುಂದುವರಿಯಲಿದೆ’ ಎಂದು ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.