ADVERTISEMENT

ನಿಸರ್ಗದ ತಾಣ ಡಾ.ಮಾಣಿಕ್‌ ನಿವಾಸ

ವೈದ್ಯರ ಮನೆಯೊಳಗೆ ‘ಪಶ್ಚಿಮಘಟ್ಟ’: ಗಿಡ, ಮರ, ಬಳ್ಳಿಗಳಿಗೆ ಸಾವಯವ ಗೊಬ್ಬರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:28 IST
Last Updated 11 ಜನವರಿ 2021, 2:28 IST
ಡಾ.ಎಂ.ಆರ್‌.ಪೂಜಾರಿ ನಿವಾಸದ ಮೇಲೆ ಬೆಳಸಿರುವ ಗಿಡಮರ ಮತ್ತು ವಿಶ್ರಾಂತಿ ಸ್ಥಳಪ್ರಜಾವಾಣಿ ಚಿತ್ರಗಳು/ ಪ್ರಶಾಂತ್‌ ಎಚ್‌.ಜಿ.
ಡಾ.ಎಂ.ಆರ್‌.ಪೂಜಾರಿ ನಿವಾಸದ ಮೇಲೆ ಬೆಳಸಿರುವ ಗಿಡಮರ ಮತ್ತು ವಿಶ್ರಾಂತಿ ಸ್ಥಳಪ್ರಜಾವಾಣಿ ಚಿತ್ರಗಳು/ ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಕನಸಿನ ಮನೆಯಂಗಳದಲ್ಲಿ ಮಾವು, ಚೀಕು, ತೆಂಗಿನ ಮರ. ತಾರಸಿ ಮೇಲೆ ತರಹೆವಾರಿ ತರಕಾರಿ, ಸುಗಂಧ ಸೂಸುವ ಹೂವು ಮತ್ತು ಬಳುಕುವ ಬಳ್ಳಿಗಳು...

–ಇಂತಹ ಸುಂದರ ಪರಿಸರದ ಹೊದಿಕೆ ಹೊದ್ದುಕೊಂಡಿರುವ ಮನೆ ಇರುವುದು ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ಪ್ರಗತಿ ಕಾಲೊನಿಯಲ್ಲಿ.

ಎಚ್‌ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಮಾಣಿಕ್‌ ರಾಚಪ್ಪ ಪೂಜಾರಿ ಈ ಮನೆಯ ಯಜಮಾನ. ಅವರು ತಮ್ಮ 40X60 ಅಳತೆಯ ಜಾಗದಲ್ಲಿ 30 ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದಾರೆ. ಜೊತೆಗೆ ಗಿಡಗಳನ್ನು ನೆಟ್ಟಿದ್ದಾರೆ. ಅವು ಈಗ ಹೆಮ್ಮರವಾಗಿ ನೆರಳಿನ ಜೊತೆಗೆ ಫಲ ನೀಡುತ್ತಿವೆ.

ADVERTISEMENT

ಇನ್ನು ಉಳಿದ ಮನೆಯ ಅಂಗಳ, ಆವರಣ ಗೋಡೆ, ಟೆರೆಸ್‌ ಸೇರಿದಂತೆ ಅವಕಾಶ ಇದ್ದಲ್ಲೆಲ್ಲ ವಿವಿಧ ರೀತಿಯ ಗಿಡಮರ, ಬಳ್ಳಿಗಳನ್ನು ಬೆಳೆಸಿ ಮಕ್ಕಳಂತೆ ಪೋಷಣೆ ಮಾಡುತ್ತಿದ್ದಾರೆ. ಮನೆ, ಆಸ್ಪತ್ರೆಯಲ್ಲಿ ಬಳಸಿದ ಕ್ಯಾನ್, ಶಿಸೆಗಳನ್ನು ಗಿಡ–ಬಳ್ಳಿ ಬೆಳೆಸಲು ಉಪಯೋಗಿಸುತ್ತಿದ್ದಾರೆ.

ಮನೆಯ ಗೇಟಿನಿಂದ ಬಾಗಿಲ ವರೆಗೆ ಅಲಂಕಾರಿಕ ಗಿಡಬಳ್ಳಿಗಳು ಕಮಾನಿನಂತೆ ಸ್ವಾಗತ ಕೋರುತ್ತವೆ. ಮನೆಯ ಅಂಗಳದಲ್ಲಿ ಪರ್ಸಿ ಹಾಕಿಲ್ಲ. ಬದಲಿಗೆ 2 ಮಾವು, 3 ತೇಗ, 2 ತೆಂಗು, 1 ಸಪೋಟ, 1 ಹತ್ತಿ, ಸೀತಾಫಲ ಗಿಡಮರಗಳಿವೆ.

ವಿವಿಧ ರೀತಿಯ ಅಲಂಕಾರಿಕ ಮತ್ತು ಆಮ್ಲಜನಕ ಸೂಸುವ ಗಿಡ, ಬಳ್ಳಿಗಳನ್ನು ಬೆಳೆಸಲು 35 ಮಣ್ಣಿನ ಪಾಟ್, 30 ಪ್ಲಾಸ್ಟಿಕ್ ಪಾಟ್, 30 ಸಿಮೆಂಟ್ ಪಾಟ್, 40 ತೂಗು ಹಾಕುವ ಪಾಟ್, 10 ತೆಂಗಿನ ಚಿಪ್ಪು, 10 ಮಣ್ಣಿನ ಕುಳ್ಳಿಗಳನ್ನು ಬಳಸಲಾಗಿದೆ. ಬಳ್ಳಿಗಳಿಗೆ ಆಸರೆಯಾಗಿ ಭತ್ತದ ಹುಲ್ಲು ಸುತ್ತಿದ 15 ಕೋಲುಗಳನ್ನು ನೆಡಲಾಗಿದೆ.

ತಾರಸಿ ಮೇಲೆ ಮೆಂತಿ, ಪುಂಡಿ, ಚಿಕ್ಕಿ ಪಲ್ಯ, ಸಬಸಿ, ಕೊತ್ತಂಬರಿ, ಪಾಲಕ್, ರಾಜಗೀರ ಸೊಪ್ಪು ಹಾಗೂ ಟೊಮೆಟೊ, ಮೆಣಸು, ಬೆಂಡಿಕಾಯಿ, ಹೀರೇಕಾಯಿ, ಹಾಗಲಕಾಯಿ, ಅವರೆ, ಬದನೆ, ಕರಿಬೇವು ಮತ್ತು ಅಂಜೂರ, ಪಪ್ಪಾಯ, ದಾಳಿಂಬೆ ಬೆಳೆಯಲು ಆಯಾ ಬೆಳೆಗಳಿಗೆ ತಕ್ಕಂತೆ ಪಾಟ್‌ಗಳನ್ನು ಇಡಲಾಗಿದೆ. ಇವುಗಳಲ್ಲಿ ಮೂರು ತಿಂಗಳಲ್ಲಿ 20 ಕಾಯಿಗಳನ್ನು ಹೊತ್ತಿರುವ ಒಂದು ಗೇಣಿನ ಬೋನ್ಸಾಯಿ ಮೂಸಂಬಿ ಗಿಡ ಆಕರ್ಷಿಸದೆ ಇರದು.

ತಾರಸಿ ಮೇಲೆ ಬಣ್ಣ ಬಳಿದು ವಾಕಿಂಗ್ ಟ್ರ್ಯಾಕ್ ಕೂಡ ನಿರ್ಮಿಸಲಾಗಿದೆ. ಮನೆಯ ಅಂಗಳ ಮತ್ತು ತಾರಸಿ ಮೇಲೆ ಅತಿಥಿಗಳು, ಕುಟುಂಬಸ್ಥರ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಮಯ ಕಳೆಯಲು ಮನಸ್ಸಿಗೆ ಮುದ ನೀಡುತ್ತದೆ.

ನೀರುಣಿಸಲು ಐವಿ ಡ್ರಿಪ್‌ ಸೆಟ್‌!

ಎಂ.ಆರ್‌.ಮೆಡಿಕಲ್‌ ಕಾಲೇಜಿನ ನೇತ್ರವಿಭಾಗದ ನಿವೃತ್ತ ಮುಖ್ಯಸ್ಥರೂ ಆಗಿರುವ ಡಾ.ಎಂ.ಆರ್‌.ಪೂಜಾರಿ, ಆಸ್ಪತ್ರೆಯ ರೋಗಿಗಳಂತೆ ಗಿಡಬಳ್ಳಿಗಳಿಗೂ ಐವಿ ಡ್ರಿಪ್ ಸೆಟ್ ಹಾಕಿ ನೀರುಣಿಸುತ್ತಾರೆ! ಗಿಡಬಳ್ಳಿಗಳ ಪಕ್ಕದಲ್ಲಿ ತಂಪು ಪಾನೀಯದ ಮತ್ತು ನೀರಿನ ಬಾಟಲ್‌ಗಳನ್ನು ತೂಗು ಹಾಕಿ ಅವುಗಳಿಗೆ ಐವಿ ಡ್ರಿಪ್‌ ಸೆಟ್‌ ಜೋಡಿಸಿ ಗಂಟೆಗೆ ಇಂತಿಷ್ಟು ಎಂ.ಎಲ್ ನಂತೆ ಸೆಟ್ ಮಾಡಿದ್ದಾರೆ.

ಬೆಳಿಗ್ಗೆ, ಸಂಜೆ ಹಕ್ಕಿಗಳ ಕಲರವ

ಪಕ್ಷಿಪ್ರೇಮಿಯಾಗಿರುವ ಪೂಜಾರಿ ಕುಟುಂಬದವರು ಮನೆಯ ತಾರಸಿ ಮೇಲೆ ಹಕ್ಕಿಗಳಿಗಾಗಿ ಪ್ರತಿದಿನ ಅಕ್ಕಿ, ರಾಗಿ, ಜೋಳದ ಕಾಳುಗಳನ್ನು ಹಾಕುತ್ತಾರೆ. ಸಾಮಾನ್ಯವಾಗಿ ಈ ಹಸಿರು ಪರಿಸರವನ್ನು ಹುಡುಕಿಕೊಂಡು ಬರುವ ಪಕ್ಷಿಗಳು ಕಾಳು ತಿಂದು, ಮುಚ್ಚಳಗಳಲ್ಲಿ ಅವುಗಳಿಗೆ ಇಟ್ಟಿರುವ ನೀರು ಕುಡಿದು ದಣಿವಾರಿಸಿಕೊಳ್ಳುತ್ತವೆ.

‘ಪಾರಿವಾಳ, ಗಿಳಿ, ಗುಬ್ಬಚ್ಚಿ ಸೇರಿದಂತೆ ನಾನಾ ರೀತಿಯ ಹಕ್ಕಿಗಳು ಬರುತ್ತವೆ. ಸಂಜೆ ಮತ್ತು ಬೆಳಗಿನ ವೇಳೆ ಅವುಗಳ ಕಲರವ ಕೇಳಲು ಇಂಪಾಗಿರುತ್ತದೆ’ ಎನ್ನುತ್ತಾರೆ ಡಾ.ಮಾಣಿಕ್ ಹಿರಿಯ ಪುತ್ರಿ ಸವಿತಾ ಪೂಜಾರಿ.

ವಿದ್ಯುತ್ ದೀಪದ ಅಲಂಕಾರ

ನೈಸರ್ಗಿಕ ಪರಿಸರದ ಅಂದ ಹೆಚ್ಚಳಕ್ಕೆ ಡಾ.ಪೂಜಾರಿ ಅವರು ವಿದ್ಯುತ್ ದೀಪಗಳನ್ನು ಒಳಗೊಂಡಿರುವ ಕಂದಿಲುಗಳನ್ನು ಅಲ್ಲಲ್ಲಿ ತೂಗು ಹಾಕಿದ್ದಾರೆ. ತಾರಸಿ ಮೇಲೆ ಸೋಲಾರದ ಬಣ್ಣಬಣ್ಣ ದೀಪದ ಕಂದಿಲುಗಳನ್ನು ಅಳವಡಿಸಿದ್ದಾರೆ. ಇನ್ನು ಪಾಟ್‌ಗಳಿಗೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣ ಬಳಿದಿದ್ದಾರೆ.

ಕಾಂಪೋಸ್ಟ್ ಗೊಬ್ಬರ ತಯಾರಿ

ಈ ಗಿಡಮರಗಳಿಗೆ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಬದಲಾಗಿ ಮನೆಯ ಮುಂದೆ ತೋಡಿದ ಗುಂಡಿಯಲ್ಲಿ ಗಿಡಮರಗಳಿಂದ ಉದುರಿದ ಎಲೆಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಹಾಕಲಾಗುತ್ತದೆ.

‘ಮನೆಯಲ್ಲಿನ ಕೊಳವೆಬಾವಿಗೆ ಕೇವಲ 90 ಫೀಟ್‌ನಲ್ಲಿ ನೀರು ಬಂದಿದೆ. ಮನೆಗೆ ಮಳೆ ನೀರಿನ ಕೋಯ್ಲು ಅಳವಡಿಸಿಕೊಂಡಿದ್ದು, ಈ ಬೋರ್‌ವೆಲ್‌ನಲ್ಲಿ ಇಂಗುವಂತೆ ವ್ಯವಸ್ಥೆ ಮಾಡಿದ್ದೇನೆ. ಹಾಗಾಗಿ, ಬೇಸಿಗೆಯಲ್ಲೂ ನೀರಿನ ಅಭಾವ ಆಗುವುದಿಲ್ಲ’ ಎಂದು ಹೇಳುತ್ತಾರೆ ಡಾ.ಎಂ.ಆರ್ ಪೂಜಾರಿ.

‘ದಿನನಿತ್ಯ ನಾವು ಏನನ್ನು ರೂಢಿಸಿಕೊಳ್ಳುತ್ತೇವೆಯೊ ಮಕ್ಕಳು ಅದನ್ನು ಅನುಸರಿಸುತ್ತವೆ. ಸಂಬಂಧಿಕರು, ಸ್ನೇಹಿತರು ಕೂಡ ಗಿಡಮರ ಬೆಳೆಸಲು ನಮ್ಮ ಮನೆಯ ಪರಿಸರದಿಂದ ಪ್ರೇರಿತರಾಗಿರುವುದು ಹೆಮ್ಮೆಯೆನಿಸುತ್ತದೆ’ ಎಂದು ನುಡಿಯುತ್ತಾರೆ ಅವರು. ಡಾ.ಎಂ.ಆರ್.ಪೂಜಾರಿ ಸಂಪರ್ಕ ಸಂಖ್ಯೆ: 9448716700.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.