ADVERTISEMENT

ಕಲಬುರಗಿ | ₹11.23 ಲಕ್ಷ ಮೌಲ್ಯದ ಸ್ವತ್ತು ವಶ

ಚಿನ್ನಾಭರಣ, ಬುಲೆರೊ, 11 ಬೈಕ್‌ಗಳು ಕಳವು ಮಾಡಿದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 4:51 IST
Last Updated 13 ಆಗಸ್ಟ್ 2024, 4:51 IST
ಅಫಜಲಪುರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡು ಮೋಟಾರ್ ಬೈಕ್ ಹಾಗೂ ಚಿನ್ನದ ವಸ್ತುಗಳನ್ನು ಪ್ರದರ್ಶಿಸಲಾಯಿತು
ಅಫಜಲಪುರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡು ಮೋಟಾರ್ ಬೈಕ್ ಹಾಗೂ ಚಿನ್ನದ ವಸ್ತುಗಳನ್ನು ಪ್ರದರ್ಶಿಸಲಾಯಿತು   

ಕಲಬುರಗಿ: ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವ ಅಫಜಲಪುರ ಠಾಣೆಯ ಪೊಲೀಸರು, ಆತನಿಂದ ₹ 11.23 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಫಜಲಪುರದ ಉಸ್ಮಾನಿಯಾ ಕಾಲೊನಿಯ ಮುಜಾಫರ್ ಮುನೀರ್ (23) ಬಂಧಿತ ಆರೋಪಿ. ₹ 4.50 ಲಕ್ಷ ಮೌಲ್ಯದ ಬೊಲೆರೊ ವಾಹನ, ವಿವಿಧ ಕಂಪನಿಗಳ ₹ 6.13 ಲಕ್ಷ ಮೌಲ್ಯದ 11 ಬೈಕ್‌ಗಳು ಹಾಗೂ ₹ 60 ಸಾವಿರ ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹ 11.23 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಫಜಲಪುರ ಠಾಣೆಯ ಪಿಎಸ್‌ಐ ಸೋಮಲಿಂಗ ಒಡೆಯರ್, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಬಸವರಾಜ, ಮಲ್ಲಿಕಾರ್ಜುನ ಭಾಸಗಿ, ಕಾಶಿನಾಥ, ಮಲ್ಲಿಕಾರ್ಜುನ ಹಿಪ್ಪರಗಿ, ಸುನಿಲ್, ಸಂತೋಷ, ಶಿವಪ್ಪ, ಕಾನ್‌ಸ್ಟೆಬಲ್‌ಗಳಾದ ವಿಶ್ವನಾಥ, ಇಮಾಮ್, ಶಂಕರ ಅವರಿದ್ದ ತಂಡ ಆರೋಪಿಯನ್ನು ಬಂಧಿಸಿದೆ.

ADVERTISEMENT

ಎಲೆಕ್ಟ್ರಿಕ್‌ ಸ್ಕೂಟರ್‌ ಬೆಂಕಿಗಾಹುತಿ: ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲ್ಟರ್ ಬೆಡ್‌ ಪ್ರದೇಶದ ರಸ್ತೆಯಲ್ಲಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ಸ್ಥಳದಲ್ಲೇ ಸ್ಕೂಟರ್‌ಗೆ ಬೆಂಕಿಗೆ ಆಹುತಿಯಾಗಿದೆ.

ರೋಹಿತ್ ಚವ್ಹಾಣ್ ಎಂಬುವರಿಗೆ ಸೇರಿದ ಸ್ಕೂಟರ್ ಸುಟ್ಟು ಕರಕಲಾಗಿದೆ. ಸ್ಕೂಟರ್ ಚಲಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಟರಿ ಸ್ಫೋಟದ ಶಬ್ದ ಕೇಳಿತು. ತಕ್ಷಣವೇ ರೋಹಿತ್ ಅವರು ಸ್ಕೂಟರ್‌ನಿಂದ ಕೆಳಗೆ ಇಳಿದರು. ಕೆಲವೇ ಕ್ಷಣಗಳಲ್ಲಿ ಬ್ಯಾಟರಿಯ ಬೆಂಕಿ ಸ್ಕೂಟರ್‌ ಅನ್ನು ಆವರಿಸಿಕೊಂಡಿತು ಎಂದು ಸ್ಥಳೀಯರು ಹೇಳಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಸಾವು: ಕಪನೂರ ಗ್ರಾಮದ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸುಲೋಚನಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೇ 25ರಂದು ಶಿವಾಜಿ ನಗರದಿಂದ ಕಪನೂರ ಗ್ರಾಮಕ್ಕೆ ಸಂಬಂಧಿ ಸಂತೋಷ ಅವರು ಚಲಾಯಿಸುತ್ತಿದ್ದ ಬೈಕ್‌ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲಿ ವೇಗವಾಗಿ ಚಲಾಯಿಸುತ್ತಿದ್ದರಿಂದ ಬೈಕ್‌ನ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಸುಲೋಚನಾ ಅವರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ಪೊಲೀಸ್‌ ಠಾಣೆ –2ರಲ್ಲಿ ಸಂತೋಷ ವಿರುದ್ಧ ಪ್ರಕರಣ ದಾಖಲಾಗಿದೆ.

ಹಾಡುಹಗಲೇ ಮಾಂಗಲ್ಯ ಸರ ಕಸಿದು ಪಾರಾರಿ ನಗರದ ಕಾಳೆ ಲೇಔಟ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಿನಿಂದ ಮಾಂಗಲ್ಯ ಸರ ಕಿತ್ತುಕೊಂಡ ಕಳ್ಳರು ಬೈಕ್ ಮೇಲೆ ಪರಾರಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನ ಅಂಬಿಕಾ ವಿಜಯಕುಮಾರ ಅವರು ಮಾಂಗಲ್ಯ ಸರ ಕಳೆದುಕೊಂಡ ಸಂತ್ರಸ್ತೆ. ಆರ್.ಜಿ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಬಿಕಾ ಅವರು ತಾಯಿಯೊಂದಿಗೆ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಮನೆಯಲ್ಲಿ ಮಗು ಅಳುತ್ತಿದೆ ಎಂದು ತಿಳಿದು ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಮನೆಗೆ ತೆರಳುತ್ತಿದ್ದರು. ಕಾಳೆ ಲೇಔಟ್‌ನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬೈಕ್‌ ಮೇಲೆ ಹಿಂಬದಿಯಿಂದ ಬಂದರು. ಹಿಂಬದಿಯಲ್ಲಿ ಕುಳಿತ ವ್ಯಕ್ತಿಯೊಬ್ಬ ಅಂಬಿಕಾ ಕತ್ತಲ್ಲಿದ್ದ ₹50 ಸಾವಿರ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.