ADVERTISEMENT

ಕಲಬುರ್ಗಿ: ಸಕಾಲಕ್ಕೆ ಲಭ್ಯವಾಗದ ಕ್ಯಾನ್; ಹಣ ನೀಡಿದರೂ ಸಿಗುತ್ತಿಲ್ಲ ಕುಡಿವ ನೀರು!

ಪರಿಹಾರ ಕಾಣದ ಸಮಸ್ಯೆ

ರಾಹುಲ ಬೆಳಗಲಿ
Published 22 ಮೇ 2019, 19:47 IST
Last Updated 22 ಮೇ 2019, 19:47 IST
ನೀರಿನ ಕ್ಯಾನ್
ನೀರಿನ ಕ್ಯಾನ್   

ಕಲಬುರ್ಗಿ: ‘ಕುಡಿಯುವ ನೀರಿನ ಸಲುವಾಗಿ ಎಷ್ಟೇ ಫೋನ್‌ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. 5 ನಿಮಿಷದಲ್ಲಿ ಬರುವುದಾಗಿ ಹೇಳಿದವರು 5 ಗಂಟೆ ದಾಟಿದರೂ ನೀರು ತರುವುದಿಲ್ಲ. ಬಾಯಾರಿದಾಗ ನೀರೇ ಸಿಗದಿದ್ದರೆ, ನಾವು ಬದುಕೋದು ಹೇಗೆ?’

–ಹೀಗೆ ಸಂಕಟ ತೋಡಿಕೊಂಡರು ವೆಂಕಟೇಶ ನಗರದ ನಿವಾಸಿ ಗೀತಾ. ಕುಡಿಯಲಿಕ್ಕೆಂದೇ ಪ್ರತಿ 3 ದಿನಕ್ಕೊಮ್ಮೆ 3 ಅಥವಾ 4 ಕ್ಯಾನ್‌ ನೀರನ್ನು ತರಿಸಿಕೊಳ್ಳುವ ಅವರು ಕಳೆದೆರಡು ವಾರಗಳಿಂದ ನೀರಿಗಾಗಿ ಪರಿತಪಿಸುವಂತಾಗಿದೆ. ‘ಫೋನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕ್ಯಾನ್‌ ನೀರನ್ನು ತರುತ್ತಿದ್ದವರು ತಮ್ಮ ಮಾತು ಉಳಿಸಿಕೊಳ್ಳುತ್ತಿಲ್ಲ. ಪದೇ ಪದೇ ಫೋನ್ ಮಾಡಿದರೆ, ಮೊಬೈಲ್ ಬಂದ್‌ಮಾಡಿಕೊಳ್ಳುತ್ತಾರೆ’ ಎಂದರು.

ನಗರದ ಬಹುತೇಕ ಬಡಾವಣೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕ್ಯಾನ್‌ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಬಹುತೇಕ ಮಂದಿ ಖಾಲಿ ಕ್ಯಾನ್‌ಗಳನ್ನು ಹೊತ್ತು ನೀರು ಪೂರೈಕೆದಾರರ ಬಳಿ ಹೋದರೆ, ಇನ್ನೂ ಕೆಲವರು ಶುದ್ಧ ಕುಡಿಯುವ ನೀರು ಸಿಕ್ಕರೆ ಸಾಕು ಎಂದು ದೂರದೂರದ ಪ್ರದೇಶಗಳಿಗೆ ಹೋಗುತ್ತಿದ್ದಾರೆ.

ADVERTISEMENT

‘ಬಡಾವಣೆಗೆ ವಾಹನಗಳಲ್ಲಿ ದಿನಕ್ಕೆ ಮೂರು ಅಥವಾ ನಾಲ್ಕು ಜನ ಕ್ಯಾನ್‌ ನೀರು ವಿತರಕರು ಬರುತ್ತಿದ್ದರು. ಒಬ್ಬರು ಇಲ್ಲದಿದ್ದರೆ ಇನ್ನೊಬ್ಬರ ಬಳಿ ನೀರು ಪಡೆಯುತ್ತಿದ್ದೆವು. ಆದರೆ, ಎರಡು ವಾರಗಳಿಂದ ಯಾರೂ ಸಹ ಇತ್ತ ಸುಳಿಯುತ್ತಿಲ್ಲ. ಮೊಬೈಲ್‌ ಕರೆ ಸಹ ಸ್ವೀಕರಿಸುತ್ತಿಲ್ಲ. ಕೆಲವರು ಕರೆ ಸ್ವೀಕರಿಸಿದರೂ ಕೆಲವೇ ಹೊತ್ತಿನಲ್ಲಿ ಮೊಬೈಲ್ ಬಂದ್‌ ಮಾಡಿಕೊಳ್ಳುತ್ತಾರೆ’ ಎಂದು ಸಂಗಮೇಶ್ವರ ಕಾಲೊನಿ ನಿವಾಸಿ ಸಂತೋಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾನಗರ ಪಾಲಿಕೆಯು ಪೂರೈಸುವ ನೀರು ಶುದ್ಧವಾಗಿ ಇರುವುದಿಲ್ಲ ಮತ್ತು ಕೊಳವೆಬಾವಿ ನೀರು ಕುಡಿಯಲು ಯೋಗ್ಯವಿರುವುದಿಲ್ಲ. ಅದಕ್ಕೆಂದೇ ವರ್ಷಗಳಿಂದ ಕ್ಯಾನ್ ನೀರು ತರಿಸಿಕೊಳ್ಳುತ್ತಿದ್ದೇವೆ. ಕ್ಯಾನ್ ನೀರು ಸಹ ಸರಿಯಾಗಿ ಪೂರೈಕೆ ಆಗದಿದ್ದರೆ, ನಾವೇನೂ ಮಾಡಬೇಕು? ಕುಡಿಯುವ ನೀರಿಗಾಗಿ ಏನು ವ್ಯವಸ್ಥೆ ಮಾಡಬೇಕು? ಅಡುಗೆ ಹೇಗೆ ಮಾಡಿಕೊಳ್ಳಬೇಕು’ ಎಂದು ಆನಂದ ನಗರದ ನಿವಾಸಿ ಕೌಶಲ್ಯಾಬಾಯಿ ಸಮಸ್ಯೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.