ADVERTISEMENT

ಮಹಿಳೆ ಸೇರಿ ಮೂವರ ಸೆರೆ

ಸ್ಮಶಾನದಲ್ಲಿ ಕೊಂದು ಕೃಷ್ಣಾ ನದಿಯಲ್ಲಿ ಶವ ಎಸೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:08 IST
Last Updated 8 ಜುಲೈ 2025, 5:08 IST
ಅಶ್ವಿನಿ
ಅಶ್ವಿನಿ   

ಕಲಬುರಗಿ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆಗೈದು ರಾಯಚೂರಿನ ಕೃಷ್ಣಾ ನದಿಯಲ್ಲಿ ಶವ ಎಸೆದ ಪ್ರಕರಣದಲ್ಲಿ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರವಾರ ಮೂಲದ ಗಣೇಶ ನಗರದ ನಿವಾಸಿ ರಾಘವೇಂದ್ರ ನಾಯಕ ಕೊಲೆಯಾದವರು. ಕೊಲೆ ಆರೋಪದಡಿ ಗುರುರಾಜ ನೆಲೋಗಿ, ಅಶ್ವಿನಿ (ತನು) ರಾಜಶೇಖರ ಹಾಗೂ ಲಕ್ಷ್ಮಿಕಾಂತ ಮಾಲಿ ಪಾಟೀಲನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ., ‘ರಾಘವೇಂದ್ರ ಅವರ ಪತ್ನಿ ಮಾರ್ಚ್ 25ರಂದು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡರು. ಈ ಹಿಂದೆ ರಾಘವೇಂದ್ರ ಜತೆಗೆ ಗಲಾಟೆ ಮಾಡಿಕೊಂಡಿದ್ದ ಗುರುರಾಜ ಹಾಗೂ ಇತರೆ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನನ್ನು ಕೊಲೆ ಮಾಡಿದ್ದು ಗೊತ್ತಾಗಿದೆ’ ಎಂದರು.

ADVERTISEMENT

‘ಗಂಡನಿಂದ ದೂರಾಗಿದ್ದ ಅಶ್ವಿನಿ ಅವರು ರಾಘವೇಂದ್ರ ಜೊತೆಗೆ ಲಿವಿಂಗ್ ಟುಗೆದರ್‌ನಲ್ಲಿದ್ದರು (ಸಹಜೀವನ). ರಾಘವೇಂದ್ರನಿಂದ ದೂರಾದ ಅಶ್ವಿನಿ ಅವರು ಬಳಿಕ ಗುರುರಾಜ ಜೊತೆಗೆ ಸಂಬಂಧ ಬೆಳೆಸಿದ್ದರು. ಇದನ್ನು ಸಹಿಸಿಕೊಳ್ಳದ ರಾಘವೇಂದ್ರ ಅವರು ತನ್ನೊಂದಿಗೆ ವಾಪಸ್‌ ಬರುವಂತೆ ಅಶ್ವಿನಿಗೆ ಬಲವಂತ ಮಾಡುತ್ತಿದ್ದರು. ಈ ಬಗ್ಗೆ ಅಶ್ವಿನಿ ಅವರು ಗುರುರಾಜಗೆ ತಿಳಿಸಿದರು’ ಎಂದು ಹೇಳಿದರು.

‘ರಾಘವೇಂದ್ರ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದುಕೊಂಡ ಗುರುರಾಜ, ರಾಘವೇಂದ್ರನ ಹಳೇ ಸ್ನೇಹಿತ ಲಕ್ಷ್ಮಿಕಾಂತ ಜತೆಗೂಡಿ ಸೂಪರ್ ಮಾರ್ಕೆಟ್‌ನ ಲಾಡ್ಜ್‌ ಒಂದರಿಂದ ಅಪಹರಿಸಿದ್ದರು. ಕಾರಿನಲ್ಲಿ ಕೃಷ್ಣ ನಗರದ ಸ್ಮಶಾನಕ್ಕೆ ಕರೆದೊಯ್ದರು. ಪಾಠ ಕಲಿಸುವ ಭರದಲ್ಲಿ ಬಡಿಗೆಗಳಿಂದ ಜೋರಾಗಿ ಹೊಡೆದಿದ್ದರಿಂದ ರಾಘವೇಂದ್ರ ಸಾವನ್ನಪ್ಪಿದರು’ ಎಂದರು.

‘ಕೊಲೆಯನ್ನು ಮುಚ್ಚಿ ಹಾಕಿ, ಸಾಕ್ಷಿ ನಾಶಪಡಿಸಲು ಶವವನ್ನು ಕಾರಿನಲ್ಲಿ ಹಾಕಿಕೊಂಡು ರಾಯಚೂರು ಜಿಲ್ಲೆಯ ಶಕ್ತಿ ನಗರ ಸಮೀಪ ಕೃಷ್ಣಾ ನದಿಯಲ್ಲಿ ಶವ ಎಸೆದಿದ್ದರು. ಬಳಿಕ ರಾಘವೇಂದ್ರ ಬಳಸುತ್ತಿದ್ದ ಮೊಬೈಲ್ ಅನ್ನು ಜಜ್ಜಿದ ಆರೋಪಿಗಳು, ಅದನ್ನು ಸುಮಾರು 150 ಕಿ.ಮೀ. ದೂರದಲ್ಲಿ ಎಸೆದಿದ್ದರು. ಕೊಲೆಯಿಂದ ತಪ್ಪಿಸಿಕೊಳ್ಳಲು ಸಾಕ್ಷ ನಾಶಕ್ಕೆ ಬಹಳಷ್ಟು ಪ್ರಯತ್ನಿಸಿದ್ದರು. ಪೊಲೀಸರು ಇದನ್ನು ಸವಾಲಾಗಿ ತೆಗೆದುಕೊಂಡು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ’ ಎಂದು ಮಾಹಿತಿ ನೀಡಿದರು.

ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಪಿಐ ಶಕೀಲ್ ಅಂಗಡಿ, ಪಿಎಸ್‌ಐ ಇಂದಿರಾ, ಎಎಸ್‌ಐ ಶಿವಶರಣಪ್ಪ ಕೋರಳ್ಳಿ, ಸಿಬ್ಬಂದಿ ಪ್ರಲ್ಹಾದ್ ಕುಲಕರ್ಣಿ, ಪ್ರಭಾಕರ್, ಜ್ಯೋತಿ, ಯಲ್ಲಪ್ಪ, ಮೋಸಿನ್, ಸಂಗಣ್ಣ, ಮಲ್ಲಣ್ಣ, ಶಿವಲಿಂಗಪ್ಪ ಅವರಿದ್ದ ತಂಡ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪ್ರಶಂಸಿಸಿದರು.

- ‘ವೇಶ್ಯಾವಾಟಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪ’

‘ಕೊಲೆಯಾದ ರಾಘವೇಂದ್ರ ಆರೋಪಿಗಳಾದ ಅಶ್ವಿನಿ ಹಾಗೂ ಲಕ್ಷ್ಮಿಕಾಂತ ಅವರು ಎಸ್‌ಐಟಿ (ವೇಶ್ಯಾವಾಟಿಕೆ ಕೇಸ್‌) ಪ್ರಕರಣದಲ್ಲಿ ಭಾಗಿಯಾಗಿದ್ದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ತಿಳಿಸಿದರು. ‘ರಾಘವೇಂದ್ರ ವಿರುದ್ಧ ಯಾದಗಿರಿ ಕಲಬುರಗಿ ನಗರದ ಠಾಣೆಗಳಲ್ಲಿ ಎಸ್‌ಐಟಿ ಪ್ರಕಣಗಳು ದಾಖಲಾಗಿವೆ. ಅಶ್ವಿನಿ ವಿರುದ್ಧ ಕಳೆದ ವರ್ಷ ಅಶೋಕ ನಗರ ಠಾಣೆಯಲ್ಲಿ ಎಸ್‌ಐಟಿ ಕೇಸ್ ಆಗಿತ್ತು. ಲಕ್ಷ್ಮಿಕಾಂತ ಸಹ ಎಸ್‌ಐಟಿ ಪ್ರಕರಣದಲ್ಲಿ ಯಾದಗಿರಿ ಪೊಲೀಸರಿಂದ ಬಂಧಿತನಾಗಿದ್ದ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.