ADVERTISEMENT

ಟಿಪ್ಪು ಜಯಂತಿ; ಅನುಮತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 11:13 IST
Last Updated 7 ನವೆಂಬರ್ 2018, 11:13 IST

ಕಲಬುರ್ಗಿ: ‘ನ.10ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಖಾಸಗಿಯಾಗಿ ಆಚರಣೆ ಮಾಡಲು ಸಂಘ–ಸಂಸ್ಥೆಗಳಿಗೆ ಅನುಮತಿ ನೀಡಬೇಕು’ ಎಂದು ಟಿಪ್ಪು ಸೌಹಾರ್ದ ವೇದಿಕೆ ಅಧ್ಯಕ್ಷ ಶೌಕತ್ ಅಲಿ ಆಲೂರ್ ಒತ್ತಾಯಿಸಿದರು.

‘ಬೆದರಿಕೆ ಮತ್ತು ಒತ್ತಡದ ಮಧ್ಯೆ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ. ಅಲ್ಲದೆ, ಸರ್ಕಾರವೇ ಒಂದು ಸಮುದಾಯವನ್ನು ಅವಮಾನಿಸುವಂತೆ ನಡೆದುಕೊಳ್ಳುತ್ತಿದೆ. ಬೇರೆ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಖಾಸಗಿಯಾಗಿ ಆಚರಿಸಲು ಅವಕಾಶವಿದೆ. ಆದರೆ ಟಿಪ್ಪು ಜಯಂತಿಗೆ ಮಾತ್ರ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಖಾಸಗಿ ಆಚರಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ನ.5ರಂದು ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಿದೆ. ಆದರೆ ಸಭೆಯಲ್ಲಿ ಜಯಂತಿಯ ಸಾಧಕ ಬಾಧಕಗಳ ಬಗ್ಗೆ ಮುಕ್ತವಾಗಿ ಚರ್ಚಿಸಿಲ್ಲ. ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು ಖಾಸಗಿ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಜಿಲ್ಲಾಡಳಿತ ಯಾರ ಅಭಿಪ್ರಾಯಗಳಿಗೂ ಮನ್ನಣೆ ನೀಡದೆ ಖಾಸಗಿ ಆಚರಣೆಗೆ ಅನುಮತಿ ನಿರಾಕರಿಸಿದೆ’ ಎಂದು ದೂರಿದರು.

ADVERTISEMENT

‘ಸಂವಿಧಾನಿಕ ತಳಹದಿಯ ಮೇಲೆ ರಚನೆಯಾದ ಸರ್ಕಾರದ ಆದೇಶವನ್ನು ಪಾಲಿಸುವಂತಹದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸರ್ಕಾರದ ಆದೇಶಕ್ಕೆ ಸಹಮತಿ ಇಲ್ಲದಿದ್ದರೆ ಸಂವಿಧಾನಿಕ ನೆಲೆಯಲ್ಲಿ ಪ್ರತಿಭಟನೆ ಮಾಡಬಹುದು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ರಾಜಕೀಯ ಕಾರಣಕ್ಕಾಗಿ ಹಿಂಸಾತ್ಮಕ ಚಳವಳಿ ನಡೆಸುವ ಬೆದರಿಕೆ ಒಡ್ಡುತ್ತಿದ್ದು, ಇದು ಖಂಡನೀಯ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲೇಶಿ ಸಜ್ಜನ, ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ, ಅಖಿಲ ಭಾರತ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ನರಿಬೋಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ರಾಜೇಂದ್ರ ರಾಜವಾಳ, ವಿಶ್ವಮಾನವ ಫೌಂಡೇಷನ್ ಅಧ್ಯಕ್ಷ ಭೀಮನಗೌಡ ಪರಗೊಂಡ, ಕುರುಬ ಸಮಾಜದ ಮುಖಂಡ ತಮ್ಮಣ್ಣ ಬಾಗೇವಾಡಿ, ವಕೀಲ ಅಮೀರ್ ಹಮ್ಜಾ ಇಜೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.