
ಕಲಬುರಗಿ: ಪ್ರತಿ ಕ್ವಿಂಟಲ್ ತೊಗರಿಗೆ ₹12,500 ಕನಿಷ್ಠ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ ಸಂಘಟನೆಗಳ ಜಂಟಿ ಒಕ್ಕೂಟವಾದ ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಕೆಎಂ) ಜಿಲ್ಲಾ ಸಮಿತಿಯಿಂದ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಐವಾನ್–ಎ–ಶಾಹಿ ಅತಿಥಿಗೃಹದತ್ತ ಸಾಗುವ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ಟ್ರ್ಯಾಕ್ಟರ್‌ಗಳು, ಎತ್ತಿನ ಬಂಡಿಗಳೊಂದಿಗೆ ಬೀಡು ಬಿಟ್ಟಿರುವ ರೈತ ಮುಖಂಡರು ಹಾಗೂ ರೈತರು, ಸರ್ಕಾರದ ರೈತ ವಿರೋಧಿ ನಿಲುವುಗಳ ವಿರುದ್ಧ ವಾಗ್ದಾಳಿ ನಡೆಸಿದರು. ‘ರೈತರ ಗೋಳು ಕೇಳದ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಮೊಳಗಿಸಿದರು.
ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಪ್ರತಿ ಕ್ವಿಂಟಲ್ ತೊಗರಿಗೆ ಕೂಡಲೇ ₹12,500 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಅದರ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ₹1 ಸಾವಿರ ಪ್ರೋತ್ಸಾಹ ಧನ ನೀಡಬೇಕು’ ಎಂದು ಒತ್ತಾಯಿಸಿದರು.
‘ಮುಖಂಡ ಮೌಲಾ ಮುಲ್ಲಾ ಮಾತನಾಡಿ, ‘ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಆ ಮೂಲಕ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.
‘ಈ ಭಾಗದಲ್ಲಿ ತೊಗರಿ ವಾಣಿಜ್ಯ ಬೆಳೆ. ಜಿಐ ಟ್ಯಾಗ್ ಹೊಂದಿದ ಫಸಲು. ಆದರೆ, ಇಂಥ ಬೆಳೆಗೂ ವಿಶೇಷ ದರ ಸಿಗುತ್ತಿಲ್ಲ. ಜಿಐ ತೊಗರಿಗೆ ಶೇ 25ರಷ್ಟು ಹೆಚ್ಚುವರಿ ದರ ನೀಡುವುದಾಗಿ ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, ವಸ್ತುಸ್ಥಿತಿ ಮಾತ್ರ ಭಿನ್ನವೇ ಆಗಿದೆ. ರಾಜಕಾರಣಿಗಳು ಹೆಸರಿಗೆ ಮಾತ್ರವೇ ತಾವೂ ರೈತರ ಮಕ್ಕಳು ಎನ್ನುತ್ತಾರೆ. ಆದರೆ, ಬರೀ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಭೀಮಾಶಂಕರ ಮಾಡಿಯಾಳ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರೈತ ವಿರೋಧಿ ಪಕ್ಷಗಳೇ ಆಗಿವೆ. ಸಂಕಷ್ಟದಲ್ಲಿರುವ ರೈತರ ಸಾಲ ಕೂಡಲೇ ಮನ್ನಾ ಮಾಡಬೇಕು. ತ್ವರಿತವಾಗಿ ಬೆಳೆ ವಿಮೆ ಪರಿಹಾರ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಉಮಾಪತಿ ಪಾಟೀಲ, ಅರ್ಜುನ್ ಗೊಬ್ಬೂರು, ಕರೆಪ್ಪ ಕರಗೊಂಡ, ನಾಗಯ್ಯ ಸ್ವಾಮಿ, ಸಿದ್ದಪ್ಪ ಕಲಶೆಟ್ಟಿ, ವೀರಣ್ಣ ಗಂಗಾಣಿ, ಜಾಫರ್ ಖಾನ್, ಗುಂಡಪ್ಪ, ಮೌನೇಶ ನಾಲವಾರ, ಸಿದ್ದಮ್ಮ ಮುತ್ತಗಿ, ಸಿದ್ದಾರ್ಥ ಠಾಕೂರ, ಶ್ಯಾಮರಾಯ ದಿಗ್ಗಾಂವ್ ಸೇರಿ ನೂರಾರು ರೈತ ಹೋರಾಟಗಾರರು ಇದ್ದರು.
ರೈತರ ಬೇಡಿಕೆಗಳು ಏನು?
* ಪ್ರತಿ ಕ್ವಿಂಟಲ್ ತೊಗರಿಗೆ ₹12500 ಬೆಂಬಲ ಬೆಲೆ ಕೊಡಬೇಕು. ಜೊತೆಗೆ ಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಲಾ ₹1 ಸಾವಿರ ಪ್ರೋತ್ಸಾಹ ಧನ ನೀಡಬೇಕು
* ಕೆಎಂಎಫ್‌ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಬೇಕು *ವಿದೇಶಿ ತೊಗರಿ ಮೇಲೆ ಶೇ 50ರಷ್ಟು ಆಮದು ಶುಲ್ಕ ವಿಧಿಸಬೇಕು
* ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಕೂಡಲೇ ಎಲ್ಲ ರೈತರಿಗೆ ಬೆಳೆವಿಮೆ ಮೊತ್ತ ಮಂಜೂರು ಮಾಡಬೇಕು
* ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು
* ಸಾಲಬಾಧೆಯಿಂದ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕು.
* ಅಮೆರಿಕ ಜೊತೆಗಿನ ಮುಕ್ತ ಮಾರುಕಟ್ಟೆ ವ್ಯಾಪಾರ ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರ ಬರಬೇಕು.
* ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಸಿ2+ಶೇ 50 ಸೇರಿಸಿ ಬೆಂಬಲ ಬೆಲೆ ಕೊಡಬೇಕು
* ಮಹಾತ್ಮ ಗಾಂಧಿ ನರೇಗಾ ಯೋಜನೆ ಪುನರ ಪ್ರತಿಷ್ಠಾಪನೆಗೆ ಕ್ರಮವಹಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.