ADVERTISEMENT

ತೊಗರಿ ದರ ತಿಂಗಳಲ್ಲಿ ₹1,300 ಜಿಗಿತ: ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಜನವರಿಯಿಂದಲೇ ದರ ಏರುಮುಖ

ಬಸೀರ ಅಹ್ಮದ್ ನಗಾರಿ
Published 3 ಫೆಬ್ರುವರಿ 2026, 21:18 IST
Last Updated 3 ಫೆಬ್ರುವರಿ 2026, 21:18 IST
ಕಲಬುರಗಿಯ ಎಪಿಎಂಸಿಗೆ ಆವಕವಾದ ತೊಗರಿಯನ್ನು ಮಹಿಳೆಯೊಬ್ಬರು ಸಂಸ್ಕರಿಸಿದರು  ಪ್ರಜಾವಾಣಿ ಸಂಗ್ರಹ ಚಿತ್ರ
ಕಲಬುರಗಿಯ ಎಪಿಎಂಸಿಗೆ ಆವಕವಾದ ತೊಗರಿಯನ್ನು ಮಹಿಳೆಯೊಬ್ಬರು ಸಂಸ್ಕರಿಸಿದರು  ಪ್ರಜಾವಾಣಿ ಸಂಗ್ರಹ ಚಿತ್ರ   

ಕಲಬುರಗಿ: ಪ್ರತಿ ಕ್ವಿಂಟಲ್‌ ತೊಗರಿ ದರ ಒಂದು ತಿಂಗಳಲ್ಲಿ ₹1,300ದಷ್ಟು ಜಿಗಿತ ಕಂಡಿದೆ.  ಇದು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ಜನವರಿ 3ರಂದು ಕಲಬುರಗಿ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್‌ ತೊಗರಿಯು ಗರಿಷ್ಠ ₹7,800ರಂತೆ ಮಾರಾಟವಾಗಿತ್ತು. ಮಂಗಳವಾರ (ಫೆ.3) ಕ್ವಿಂಟಲ್‌ಗೆ ₹9,113ರಂತೆ ಬಿಕರಿಯಾಗಿದೆ.

ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ 5.91 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿತ್ತು. ಅತಿವೃಷ್ಟಿಯಿಂದ ಭಾಗಶಃ ಬೆಳೆ ಹಾಳಾಗಿದ್ದು, ದರ ಏರಿಕೆ ನಿರೀಕ್ಷಿಸಲಾಗಿತ್ತು.

ADVERTISEMENT

ಈ ಹಂಗಾಮಿನ ಕಟಾವು ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಮಾರುಕಟ್ಟೆಗೆ ಡಿಸೆಂಬರ್‌ನಿಂದಲೇ ಆವಕ ಶುರುವಾಗಿತ್ತು. ಡಿಸೆಂಬರ್‌ನಲ್ಲಿ ಕಲಬುರಗಿ ಎಪಿಎಂಸಿಗೆ 52 ಸಾವಿರ ಕ್ವಿಂಟಲ್‌ ತೊಗರಿ ಆವಕವಾಗಿ ಗರಿಷ್ಠ ₹7,829 ದರವಿತ್ತು. ಜನವರಿಯಲ್ಲಿ 54 ಸಾವಿರ ಕ್ವಿಂಟಲ್‌ ಆವಕವಾಗಿದ್ದು, ಗರಿಷ್ಠ ₹9,169 ದರ ದೊರೆತಿತ್ತು.

ಖರೀದಿ ಕೇಂದ್ರ ಭಣಭಣ

ಕ್ವಿಂಟಲ್‌ ತೊಗರಿಗೆ ಕೇಂದ್ರ ಈ ಸಾಲಿನಲ್ಲಿ ₹8 ಸಾವಿರ ಎಂಎಸ್‌ಪಿ ನಿಗದಿಗೊಳಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ₹9 ಸಾವಿರಕ್ಕೂ ಅಧಿಕ ದರವಿದ್ದು, ಹೆಚ್ಚಿನ ರೈತರು ಖರೀದಿ ಕೇಂದ್ರಗಳತ್ತ ಸುಳಿದಿಲ್ಲ.

‘ಜಿಲ್ಲೆಯಲ್ಲಿ 195 ತೊಗರಿ ಖರೀದಿ ಕೇಂದ್ರ ತೆರೆಯಲಾಗಿದೆ. ಡಿಸೆಂಬರ್‌ 18ರಿಂದ ಈವರೆಗೆ 20,270 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಬರೀ 343 ಕ್ವಿಂಟಲ್‌ ತೊಗರಿ ಆವಕವಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ಕಲಬುರಗಿ ಸಹಾಯಕ ನಿರ್ದೇಶಕ ಸಂತೋಷ ಬುಡಗೆ ಮಾಹಿತಿ ನೀಡಿದ್ದಾರೆ.

‘ಕಳೆದ ವರ್ಷದ ಜಿಲ್ಲೆಯಲ್ಲಿ 40 ಸಾವಿರದಷ್ಟು ರೈತರು ತೊಗರಿ ಖರೀದಿಗೆ ಹೆಸರು ನೋಂದಾಯಿಸಿದ್ದರು. ಒಟ್ಟು 6.67 ಲಕ್ಷ ಕ್ವಿಂಟಲ್‌ ತೊಗರಿ ಆವಕವಾಗಿತ್ತು’ ಎಂದು ಹೇಳಿದ್ದಾರೆ.

ಎಂಎಸ್‌ಪಿ ಕೇವಲ ರೈತರ ಕಣ್ಣೊರೆಸುವ ತಂತ್ರವಾಗಿದೆ. ತೊಗರಿಗೆ ಕ್ವಿಂಟಲ್‌ಗೆ ಕನಿಷ್ಠ ₹12500 ಎಂಎಸ್‌ಪಿ ನೀಡಬೇಕು
– ಶರಣಬಸಪ್ಪ ಮಮಶೆಟ್ಟಿ, ರೈತ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.