ADVERTISEMENT

ಕಲಬುರಗಿ: ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ಪಾವತಿಗೆ ಡಿ. 12 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:29 IST
Last Updated 3 ಡಿಸೆಂಬರ್ 2025, 5:29 IST
ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಶ್ರೀನಿವಾಸ ನವಲೆ ಮಾತನಾಡಿದರು
ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಶ್ರೀನಿವಾಸ ನವಲೆ ಮಾತನಾಡಿದರು   

ಕಲಬುರಗಿ: ‘ನಿಯಮ ಉಲ್ಲಂಘಿಸಿದ ವಾಹನಗಳಿಗೆ ವಿಧಿಸಲಾಗಿರುವ ದಂಡ ಪಾವತಿ ಮೊತ್ತದಲ್ಲಿ ಡಿ. 12ರ ವರೆಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ವಾಹನಗಳ ಮೇಲಿನ ದಂಡವನ್ನು ಪಾವತಿಸುವ ಮೂಲಕ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಿ’ ಎಂದು ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ನವಲೆ ಹೇಳಿದರು.

ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಲಾರಿ ಮಾಲೀಕರು, ಆಟೊ ಚಾಲಕರು ಮತ್ತು ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

‘ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ಅದರೊಟ್ಟಿಗೆ ಸಂಚಾರಿ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರವು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ದಂಡ ಪಾವತಿಯ ಮೊತ್ತದಲ್ಲಿ ರಿಯಾಯಿತಿ ನೀಡಲು ಸರ್ಕಾರಕ್ಕೆ ಮನವಿ ಮಾಡಿತ್ತು, ಇದಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರವು ಶೇಕಡ 50 ರಷ್ಟು ರಿಯಾಯಿತಿ ಘೋಷಿಸಿದೆ’ ಎಂದು ತಿಳಿಸಿದರು.

ADVERTISEMENT

‘ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ 1991 ರಿಂದ 2020 ವರೆಗಿನ ಅವಧಿಯಲ್ಲಿ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಮಾತ್ರ ರಿಯಾಯಿತಿ ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆಯ ಇ- ಚಲನ್‌ಗಳಲ್ಲಿನ ಎಲ್ಲಾ ಪ್ರಕರಣಗಳಿಗೂ ಈ ರಿಯಾಯಿತಿ ಅನ್ವಯಿಸುತ್ತದೆ’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ‘ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 1,57,000 ಜನ ರಸ್ತೆ ಅಪಘಾತದಿಂದ ಅಕಾಲಿಕವಾಗಿ ಮೃತಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದರ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯದ ಜೊತೆಗೆ ನಿಯಮ ಉಲಂಘನೆಗೆ ದಂಡ ವಿಧಿಸುತ್ತಿದೆ ಹೊರತು ಯಾವುದೆ ರೀತಿಯ ಸಂಪನ್ಮೂಲ ಕ್ರೋಢೀಕರಣಕ್ಕಲ್ಲ’ ಎಂದು ಹೇಳಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪ್ರವೀಣ ನಾಯಕ ಮಾತನಾಡಿ, ‘ಇ–ಚಲನ್‌ ಮೂಲಕ ವಿಧಿಸಲಾಗಿರುವ ಎಲ್ಲ ಅವಧಿಯ ಪ್ರಕರಣಗಳಲ್ಲಿನ ದಂಡಪಾವತಿ ಮೊತ್ತದಲ್ಲಿ ರಿಯಾಯಿತಿ ಇದ್ದು, ನಗರದಲ್ಲಿನ ಎರಡು ಸಂಚಾರಿ ಪೊಲೀಸ್‌ ಠಾಣೆ ಮತ್ತು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ದಂಡ ಪಾವತಿಸಬಹುದು’ ಎಂದು ತಿಳಿಸಿದರು.

ಸಭೆಯಲ್ಲಿ ಆಟೊ ಚಾಲಕರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಹುಳಿಪಲ್ಯಾ, ಪದಾಧಿಕಾರಿಗಳಾದ ಶೇಖ್‌ ಸಾಬ, ಪಾಂಡುರಂಗ ಕೊಟ್ರೆ, ಆರ್‌ಟಿಒ ಕಚೇರಿ ಅಧೀಕ್ಷರಾದ ಮಂಜುನಾಥ ಪಾಟೀಲ, ಭೀಮರಾಯ ಸೇರಿದಂತೆ ಇತರರಿದ್ದರು.

ಪ್ರಕಾಶ ಖೇಮಜಿ
ಪ್ರತಿ ವರ್ಷವು ಪರವಾನಿಗೆ ನವೀಕರಣಕ್ಕಾಗಿ ಎಲ್ಲ ದಂಡಗಳನ್ನು ಪಾವತಿಸಿದ್ದೇವೆ. ಆದರೂ ಎಲ್ಲ ಲಾರಿ ಮಾಲೀಕರಿಗೆ ಈ ಕುರಿತು ಮಾಹಿತಿ ಹಂಚಿಕೊಂಡು ಇಲಾಖೆಗೆ ಸಹಕಾರ ನೀಡಲಾಗುವುದು.
ಪ್ರಕಾಶ ಖೇಮಜಿ ಲಾರಿ ಮಾಲೀಕರ ಅಸೋಸಿಯೇಷನ್‌ ಅಧ್ಯಕ್ಷ

‘ಈವರೆಗೆ ಒಂದೂ ಪ್ರಕರಣ ವಿಲೇವಾರಿಯಾಗಿಲ್ಲ’ ‘ಸಾರಿಗೆ ಇಲಾಖೆಯಲ್ಲಿ ರಿಯಾತಿಗೆ ಒಳಪಡುವ 1200 ಪ್ರಕರಣಗಳಿದ್ದು ಈವರೆಗೆ ಒಂದೂ ಪ್ರಕರಣ ವಿಲೇವಾರಿ ಆಗಿಲ್ಲ. ಪೊಲೀಸ್‌ ಇಲಾಖೆಯಲ್ಲಿ ಆಟೊಗಳ 3000 ಪ್ರಕರಣಗಳಲ್ಲಿ 159 ಹಾಗೂ ಕಾರುಗಳ 304 ಪ್ರಕರಣಗಳಲ್ಲಿ ಕೇವಲ 2 ಪ್ರಕರಣಗಳಲ್ಲಿ ದಂಡ ಪಾವತಿಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.