ADVERTISEMENT

ಕ್ವಿಂಟಲ್ ತೊಗರಿಗೆ ₹ 12,400 ಬೆಲೆ ನಿಗದಿ ಮಾಡಿ: ರೈತರ ಆಗ್ರಹ

ತಹಶೀಲ್ದಾರ್ ಕಚೇರಿ ಮುಂದೆ ಕಬ್ಬು ಹಿಡಿದುಕೊಂಡು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:01 IST
Last Updated 22 ನವೆಂಬರ್ 2025, 6:01 IST
ಚಿತ್ತಾಪುರ ತಹಶೀಲ್ದಾರ್ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಚಿತ್ತಾಪುರ ತಹಶೀಲ್ದಾರ್ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು    

ಚಿತ್ತಾಪುರ: ‘ರೈತರ ವಾಣಿಜ್ಯ ಬೆಳೆಯಾದ ತೊಗರಿಗೆ ಪ್ರತಿ ಕ್ವಿಂಟಲಿಗೆ ₹12,400 ಬೆಲೆ ನಿಗದಿ ಮಾಡಬೇಕು. ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜನವರಿ ತಿಂಗಳಿನಲ್ಲಿಯೇ ಖರೀದಿ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಅತಿವೃಷ್ಟಿಯಿಂದ ಹೊಲಗಳಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಪ್ರತಿ ಕ್ವಿಂಟಲ್ ಕಡಲೆಗೆ ₹9,500 ಬೆಲೆ ನಿಗದಿ ಪಡಿಸಬೇಕು. ಸರ್ಕಾರ ಘೋಷಿಸಿರುವ ಪ್ರಕಾರ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಅಡಿಯಲ್ಲಿ ಪರಿಹಾರ ಧನವನ್ನು ತಕ್ಷಣ ರೈತರ ಖಾತೆಗೆ ಜಮೆ ಮಾಡಬೇಕು. ಬೆಳೆ ಹಾನಿಗೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ 7 ಗಂಟೆಯ ಬದಲಿಗೆ 10 ಗಂಟೆಯವರೆಗೆ ವಿದ್ಯುತ್ ಪೂರೈಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ನಮ್ಮ ಹೊಲ ನಮ್ಮ ದಾರಿ’ ಎಂಬ ಘೋಷವಾಕ್ಯದಂತೆ ರೈತರು ತಮ್ಮ ಹೊಲಗಳಿಗೆ ಹೋಗಿ ಬರಲು ರಸ್ತೆ ಸಂಪರ್ಕ ವ್ಯವಸ್ಥೆ ಮಾಡಬೇಕು. ಜಿಪಿಎಸ್ ತಂತ್ರಜ್ಞಾನದ ಮೂಲಕ ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಮಾಡಿಸಬೇಕು. ಹೆಸರು, ಉದ್ದು, ತೊಗರಿ ಖರೀದಿ ಕೇಂದ್ರದಲ್ಲಿ ಹಮಾಲಿ ಹಣ ಸರ್ಕಾರ ಭರಿಸುತ್ತಿದ್ದರೂ ಹಮಾಲಿ ಹಣವನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ಅದನ್ನು ರದ್ದು ಮಾಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಾಲ್ಲೂಕು ಅಧ್ಯಕ್ಷ ಶಾಮರಾಯ ಸಂಗಾವಿ, ಉಪಾಧ್ಯಕ್ಷ ರಮೇಶ ನಾಯಕ, ಅರ್ಜುನ ಸಾಲಹಳ್ಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಗೌರವಾಧ್ಯಕ್ಷ ಮಲ್ಲರೆಡ್ಡಿ ಪಾಟೀಲ್, ಖಜಾಂಚಿ ನಾಗರಾಜ ಹೂಗಾರ, ಕಾರ್ಯದರ್ಶಿ ಶಂಭುಲಿಂಗ ವಿಶ್ವಕರ್ಮ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಸಂಚಾಲಕ ಗುರಣ್ಣಾ ಹಂದರಕಿ, ಕಾನೂನು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಡಿಗೇರ, ಶಿವರಾಮ ಚವಾಣ್, ವಿಜಯ ರಾಠೋಡ, ಶ್ರೀಶೈಲ ಪಾಟೀಲ್, ಯಂಕು ನಾಯಕ, ತಿಪ್ಪಣ್ಣ ಭೀಮನಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.