ADVERTISEMENT

ಶ್ರೀಗಂಧ ಕಳವು: ಇಬ್ಬರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:30 IST
Last Updated 1 ಡಿಸೆಂಬರ್ 2022, 4:30 IST
   

ಕಲಬುರಗಿ: ಅಕ್ರಮವಾಗಿ ಶ್ರೀಗಂಧದ ಮರ ಕಡಿದು, ಮಾರಲು ಕದ್ದು ಒಯ್ದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮ ನಿವಾಸಿ ವಿಜಯಕುಮಾರ ಸುಭಾಷ ಮಾನೆ ಮತ್ತ ಸಂದೀಪ ಗುರುನಾಥ ಜಾಧವ ಶಿಕ್ಷೆಗೆ ಒಳಗಾದವರು.

2019ರ ಡಿಸೆಂಬರ್ 22ರಂದು ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಸಂಗೋಳಗಿ(ಕುಣಿಸಂಗಾವಿ) ಗ್ರಾಮದ ಜಮೀನಿನ ಬಾಂದಾರಿಯಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧದ ಮರವನ್ನು ವಿಜಯಕುಮಾರ ಮತ್ತು ಸಂದೀಪ ಕಡಿದರು. ನಂತರ 4.5 ಕೆಜಿಯ ಶ್ರೀಗಂಧದ ತುಂಡನ್ನು ಬೈಕ್‌ನಲ್ಲಿ ಇರಿಸಿಕೊಂಡು ಮಾರಲು ಮಹಾರಾಷ್ಟ್ರದತ್ತ ತೆರಳುತ್ತಿದ್ದರು.

ADVERTISEMENT

ಮಾರ್ಗ ಮಧ್ಯೆ ನರೋಣಾ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು ಶ್ರೀಗಂಧದ ತುಂಡು ಹಾಗೂ ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆದರು. ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ವಾದ ವಿವಾದ ಆಲಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಇಬ್ಬರೂ ಅಪರಾಧಿಗಳಿಗೆ ವಿವಿಧ ಸೆಕ್ಷನ್‌ಗಳಡಿ 5 ವರ್ಷ ಜೈಲು ಶಿಕ್ಷೆ, ₹ 1 ಲಕ್ಷ ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದರು. ನರೋಣಾ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಶಶಿಕಾಂತ್ ಸಿಪಿಸಿ ಬಸವರಾಜ ಅವರು ಪ್ರಕರಣದ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.