ADVERTISEMENT

ಎರಡು ವರ್ಷದ ಪುಟಾಣಿ ಈಗ ಮಹಾ ಸಂಸ್ಥಾನದ ಪೀಠಾಧಿಪತಿ

ಶರಣಬಸವೇಶ್ವರ ಮಹಾ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:25 IST
Last Updated 23 ಡಿಸೆಂಬರ್ 2019, 14:25 IST
ಕಲಬುರ್ಗಿಯ ಶರಣ ಬಸವೇಶ್ವರ ಮಹಾ ಸಂಸ್ಥಾನದ 9ನೇ ಪೀಠಾಧಿಪತಿ ಆಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪಟ್ಟಾಧಿಕಾರ ಮಹೋತ್ಸವ ಭಾನುವಾರ ನೆರವೇರಿತು
ಕಲಬುರ್ಗಿಯ ಶರಣ ಬಸವೇಶ್ವರ ಮಹಾ ಸಂಸ್ಥಾನದ 9ನೇ ಪೀಠಾಧಿಪತಿ ಆಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪಟ್ಟಾಧಿಕಾರ ಮಹೋತ್ಸವ ಭಾನುವಾರ ನೆರವೇರಿತು   

ಕಲಬುರ್ಗಿ: ಇಲ್ಲಿನ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಭಾನುವಾರ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪಟ್ಟಾಭಿಷೇಕ ಮಹೋತ್ಸವ ಶಾಸ್ತ್ರ ವಿಧಾನಗಳ ಪ್ರಕಾರ ನೆರವೇರಿತು. ಶರಣಬಸವೇಶ್ವರ ಮಹಾ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಅವರನ್ನು ನೇಮಿಸಲಾಯಿತು.

8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ, ದಾಕ್ಷಾಯಿಣಿ ಅವ್ವ ಹಾಗೂ ವಿವಿಧ ವೀರಶೈವ ಮಠಗಳ ಮುಖ್ಯಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಈ ಕಾರ್ಯ ನೆರವೇರಿಸಲಾಯಿತು. ಎರಡು ವರ್ಷದ ಪುಟಾಣಿ ಬಾಲಕ ಮಹಾ ಸಂಸ್ಥಾನದ ಪೀಠ ಏರುವ ಮೂಲಕ ಇಡೀ ಸಂಸ್ಥಾನದ ಇತಿಹಾಸದಲ್ಲಿ ವಿಶಿಷ್ಟ ದಿನವಾಯಿತು.

18ನೇ ಶತಮಾನದ ಸಂತ ಶರಣಬಸವೇಶ್ವರ ಅವರು ಬೆಳಗಿಸಿದ ‘ನಂದಾ ದೀಪ’ದ ಮುಂದೆ ಪುಟ್ಟ ಕಂದ ದೊಡ್ಡಪ್ಪ ಅಪ್ಪ ಅವರ ಉತ್ತರಾಧಿಕಾರವನ್ನು ಸಾಕಾರಗೊಳಿಸಲಾಯಿತು.ಡಾ.ಶರಣಬಸವಪ್ಪ ಅಪ್ಪ ಅವರ ಮಡಿಲಲ್ಲಿ ಕೂತ ಚಿರಂಜೀವಿ ಎಲ್ಲ ಪ್ರಕ್ರಿಯೆಗಳನ್ನೂ ಬೆರಗುಗಣ್ಣಿನಿಂದ ನೋಡುತ್ತಿದ್ದರೆ, ಪುತ್ರನಿಗೆ ಅಧ್ಯಾತ್ಮ ಪಾಠ ಹೇಳಿಕೊಡುವ ಜವಾಬ್ದಾರಿ ಸ್ವತಃ ಡಾ.ಶರಣಬಸವಪ್ಪ ಅಪ್ಪ ಅವರೇ ಹೊತ್ತುಕೊಂಡರು.

ADVERTISEMENT

ಹಾರಕೂಡ ಸಂಸ್ಥಾನ ಮಠದ ಡಾ. ಚನ್ನವೀರ ಶಿವಾಚಾರ್ಯರು, ಆಂಧ್ರಪ್ರದೇಶದ ಶ್ರೀಶೈಲಂ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸುಲಫಲ ಮಠದ ರಾಜಶೇಖರ ಸ್ವಾಮಿಗಳು, ಕಲಬುರ್ಗಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಬೆಳಗುಂಪಿಯ ಅಭಿನವ ಮುನೀಂದ್ರ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು ಮಡಕಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಸಹೋದರಿಯರಾದ ಶಿವಾನಿ, ಕೋಮಲಾ ಮತ್ತು ಮಹೇಶ್ವರಿ ಇದ್ದರು.

ನಂತರ ಪೀಠಾರೋಹಣ ಸಮಾರಂಭವು ದಾಸೋಹ ಮಹಾಮನೆ ಮುಖ್ಯ ಸಭಾಂಗಣದಲ್ಲಿ ನಡೆಯಿತು. ‘9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ಜಯವಾಗಲಿ’ ಎಂದು ಘೋಷಣೆ ಮೊಳಗಿಸಲಾಯಿತು. 36 ವರ್ಷಗಳ ಹಿಂದೆ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪಾಜಿ ತಮ್ಮ ಹಳೆ ದಿನಗಳನ್ನು ನೆನೆದರು. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ದಯೆ ಮತ್ತು ಕರುಣೆ ಸಿಗಲಿ ಎಂದು ಆಶೀರ್ವದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.