ADVERTISEMENT

ಕಲಬುರ್ಗಿ: ಅಪಘಾತದಿಂದಾಗಿ ಯುವಕರಿಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 5:45 IST
Last Updated 20 ಜೂನ್ 2021, 5:45 IST
ಸೀತಾಬಾಯಿ
ಸೀತಾಬಾಯಿ   

ಕಲಬುರ್ಗಿ: ಇಲ್ಲಿನ ರಿಂಗ್‌ ರಸ್ತೆಯ ನಾಗನಹಳ್ಳಿ ಕ್ರಾಸ್‌ ಬಳಿ ಶನಿವಾರ ಬೈಕ್‌ ಜಾರಿಬಿದ್ದು ಯುವಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಅಭಿಷೇಕ ವಿಜಯಕುಮಾರ ಮಾಲಿಪಾಟೀಲ (25) ಮತ್ತು ಈತನ ಸ್ನೇಹಿತ ಅಭಿಷೇಕ ಬಸವರಾಜ ಪಟ್ಟಣಶೆಟ್ಟಿ (25) ಗಾಯಗೊಂಡವರು. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ರಿಂಗ್‌ ರಸ್ತೆಯಲ್ಲಿ ರಸ್ತೆ ಮಧ್ಯದ ವಿಭಜಕಕ್ಕೆ ಬೈಕ್‌ ಗುದ್ದಿದೆ. ಬೈಕ್‌ ಬಿದ್ದ ಮೇಲೆ ಇಬ್ಬರನ್ನೂ ರಸ್ತೆ ಮೇಲೆ ಎಳೆದುಕೊಂಡು ಹೋಗಿದೆ. ಇದರಿಂದ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇನ್‍ಸ್ಪೆಕ್ಟರ್ ಅಮರೇಶ ಸ್ಥಳಕ್ಕೆ ಭೇಟಿ ನೀಡಿದರು. ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆಗೆ ಸಂಚು: ಬಂಧನ

ನಗರದ ದುಬೈ ಕಾಲೊನಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಏಳು ಆರೋಪಿಗಳನ್ನು ಕಮಿಷನ್‍ರೇಟ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶೇಖಜಿಲಾನಿ, ತಯ್ಯಬಅಲಿ, ಸೈಯದ್ ಜುಬೇರ್, ಖಾಜಾಪಾಷಾ ಅಲಿಯಾಸ್ ಸೋಹೆಲ್, ಮಹ್ಮದ್‌ ನದೀಮ್ ಮತ್ತು ಇಮ್ರಾನ್ ಶೇಖ್‌ ಬಂಧಿತರು.

ನಗರ ಪೊಲೀಸ್‌ ಆಯುಕ್ತ ಡಾ.ವೈ.ಎಸ್. ರವಿಕುಮಾರ, ಡಿಸಿಪಿಗಳಾದ ಎ.ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಗಿರೀಶ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಎಸ್.ಆರ್. ನಾಯಕ ಮತ್ತು ಸಿಬ್ಬಿಂದ ದಾಳಿ ನಡೆಸಿದ್ದಾರೆ.

ಆರೋಪಿಗಳು 15 ದಿನಗಳಹಿಂದೆ ಚೌಕ್ ಠಾಣೆಯ ವ್ಯಾಪ್ತಿಯಲ್ಲಿರುವ ಲಾರಿ ತಂಗುದಾಣ ಮತ್ತು ಆಟೊ ನಗರದಲ್ಲಿ ಚಾಲಕನಿಗೆ ಚಾಕು ಇರಿದು ಹಣ ಮತ್ತು ಮೊಬೈಲ್ ದರೋಡೆ ಮಾಡಿದ್ದರು. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ತಂತಿ ತಗಲಿ ಮಹಿಳೆ ಸಾವು

ಚಿಂಚೋಳಿ: ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಪೆದ್ದಾ ತಾಂಡಾದ ಹಿಂದುಗಡೆ ಕಾಡಿನಲ್ಲಿ ಶನಿವಾರ ಹೈಟೆನ್ಷನ್ ವಿದ್ಯುತ್‌ ತಂತಿ ತಗಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಶ್ರೀನಗರ ಪೆದ್ದಾ ತಾಂಡಾದ ನಿವಾಸಿ ಸೀತಾ ಬಾಯಿ ಲಷ್ಕರ್ ಚವ್ಹಾಣ (48) ಎಂದು ಗುರುತಿಸಲಾಗಿದೆ.

ಎಂದಿನಂತೆ ತಮ್ಮ ಮೇಕೆಗಳನ್ನು ಮೇಯಿಸಲು ಮನೆಯಿಂದ ಬೆಳಿಗ್ಗೆ 11.30ಕ್ಕೆ ಕಾಡಿಗೆ ತೆರಳಿದ್ದಾರೆ. ಕಾಡಿನಲ್ಲಿ ಮಾರ್ಗಮಧ್ಯದಲ್ಲಿ ಹೈಟೆನ್ಷನ್‌ ವಿದ್ಯುತ್‌ ತಂತಿ ನೆಲದಿಂದ ಕೇವಲ 4 ಅಡಿ ಎತ್ತರದಲ್ಲಿ ನೇತಾಡುತ್ತಿತ್ತು. ಗಿಡಗಳ ಮಧ್ಯೆ ಸಾಗುತ್ತಿದ್ದ ಸೀತಾಬಾಯಿ ಅವರು ತಂತಿಯನ್ನು ಗಮನಿಸದೇ ಅದರ ಮಾರ್ಗದಲ್ಲೇ ದಾಟಿದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಅವರ ಕುತ್ತಿಗೆ ಭಾಗಕ್ಕೆ ತಂತಿ ತಗುಲಿ ಸ್ಥಳದಲ್ಲೇ ಅವರು ಅಸುನೀಗಿದ್ದಾರೆ. ತಂತಿಯಿಂದ ಹೊತ್ತಿಕೊಂಡ ಬೆಂಕಿಯಿಂದ ಅವರ ಕುತ್ತಿಗೆ ಹಾಗೂ ಬೆನ್ನಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.

ಮೃತರಿಗೆ ಪತಿ ಲಷ್ಕರ್ ಚವ್ಹಾಣ ಹಾಗೂ ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ. ಲಷ್ಕರ್ ಚವ್ಹಾಣ ನೀಡಿದ ದೂರಿನ ಮೇರೆಗೆ ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ಉಪೇಂದ್ರಕುಮಾರ, ಎಂಜಿನಿಯರ್ ಉಮೇಶ ಗೋಳಾ, ಶಾಖಾಧಿಕಾರಿ ಮೋಹನ ರಾಠೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ರಾಜು ರಾಠೋಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೂರನೇ ಸಾವು: ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ಕೂಡ ಶುಕ್ರವಾರ ಕೆಲಸ ಮಾಡಲು ಹೋಗಿದ್ದ ಇಬ್ಬರು ಯುವಕರು ವಿದ್ಯುತ್‌ ತಂತಿ ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ರೀತಿ ತಂತಿ ಹರಿದು ಕಾರಣ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.