ADVERTISEMENT

‘ಕೆಲವರಿಗೆ ದಲಿತರ ಹಿತಕ್ಕಿಂತ ಕುರ್ಚಿಯೇ ಮುಖ್ಯ’-ಸಚಿವ ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:44 IST
Last Updated 5 ಏಪ್ರಿಲ್ 2022, 5:44 IST
ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿವರಾಜ ಪಾಟೀಲ ರದ್ದೇವಾಡಗಿ, ದತ್ತಾತ್ರೇಯ ಪಾಟೀಲ ರೇವೂರ, ದಶರಥ ಕಲಗುರ್ತಿ, ಬಸವರಾಜ ಮತ್ತಿಮೂಡ, ರಾಜು ವಾಡೇರ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು
ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿವರಾಜ ಪಾಟೀಲ ರದ್ದೇವಾಡಗಿ, ದತ್ತಾತ್ರೇಯ ಪಾಟೀಲ ರೇವೂರ, ದಶರಥ ಕಲಗುರ್ತಿ, ಬಸವರಾಜ ಮತ್ತಿಮೂಡ, ರಾಜು ವಾಡೇರ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು   

ಕಲಬುರಗಿ: ‘ಕೆಲವರಿಗೆ ದಲಿತರ ಹಿತಕ್ಕಿಂತ ಕುರ್ಚಿಯೇ ಮುಖ್ಯವಾಗಿದೆ. ಮಾದಿಗ ದಂಡೋರ ಸಮಿತಿಯು ಸೂಕ್ತ ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ, ದೇಶದ ಯಾವ ಸದನದಲ್ಲಿಯೂ ಒಂದು ನಿಮಿಷವೂ ಚರ್ಚೆ ನಡೆದಿಲ್ಲ. ಬೇಕಿದ್ದರೆ ಹಿಜಾಬ್‌ನಂತಹ ವಿಚಾರಗಳ ಬಗ್ಗೆ ದಿನಗಟ್ಟಲೇ ಚರ್ಚೆ ನಡೆಯುತ್ತದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಟೀಕಿಸಿದರು.

ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 115ನೇ ಜಯಂತ್ಯುತ್ಸವ ಸಮಿತಿಯು ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ ಸಮುದಾಯಗಳಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆಯೂ ತೀರಾ ಕಡಿಮೆ ಚರ್ಚೆ ನಡೆದಿದೆ. ಹುಬ್ಬಳ್ಳಿಯಲ್ಲಿ ನಡೆದ ಮಾದಿಗ ಸಮಾವೇಶಕ್ಕೆ ತೆರಳುತ್ತಿದ್ದ ಎಂಟು ಜನರು ಅಪಘಾತದಲ್ಲಿ ಮೃತಪಟ್ಟರು. ಆ ಬಗ್ಗೆಯೂ ಯಾವುದೇ ಚರ್ಚೆ ನಡೆಯಲಿಲ್ಲ ಎಂದರು.

‘ಮಹಾನ್ ನಾಯಕರಾಗಿದ್ದ ಡಾ. ಬಾಬು ಜಗಜೀವನರಾಂ ಅವರು ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾಗ ರೈತ ಸಮುದಾಯವನ್ನು ಮೇಲೆತ್ತುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಕಾರ್ಮಿಕ ಸಚಿವರಾಗಿದ್ದಾಗ ಇಎಸ್‌ಐ, ವಿಮೆ ಸೌಲಭ್ಯವನ್ನು ಒದಗಿಸಿದರು. ಪ್ರಧಾನಿಯಾಗುವ ಎಲ್ಲ ಅರ್ಹತೆಗಳಿದ್ದರೂ ಅವರು ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪ್ರಧಾನಿ ಹುದ್ದೆಯನ್ನು ತಪ್ಪಿಸಲಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈಗಲಾದರೂ ಮಾದಿಗ ಸಮುದಾಯ ಸಂಘಟಿತವಾಗಿ ನಮ್ಮ ಹಕ್ಕುಗಳನ್ನು ಕೇಳಲು ಮುಂದಾಗಬೇಕು. ಇಲ್ಲದಿದ್ದರೆ ಯಾರು ಸಂಘಟಿತರು, ಬಲಾಢ್ಯರಿದ್ದಾರೋ ಅವರಿಗೇ ಎಲ್ಲ ಸವಲತ್ತುಗಳು ಸಿಗುತ್ತವೆ. ರಾಜಧಾನಿ ಬೆಂಗಳೂರಿನಲ್ಲೇ ಮಾದಿಗ ಸಮುದಾಯದವರು ಒಂದೆಡೆ ಸಭೆ ಸೇರಲು ಡಾ. ಬಾಬು ಜಗಜೀವನರಾಂ ಸಮುದಾಯ ಭವನವಿಲ್ಲ. ಸಮುದಾಯಕ್ಕೆ ಕನಿಷ್ಠ 30x40 ಅಳತೆಯ ಒಂದು ನಿವೇಶನವೂ ಇಲ್ಲ’ ಎಂದರು.

‘ಕಲಬುರಗಿ ನಗರದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಸುಸಜ್ಜಿತವಾದ ಡಾ. ಬಾಬು ಜಗಜೀವನರಾಂ ಸಮುದಾಯ ಭವನವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ. ಇಂತಹ ಭವನ ರಾಜ್ಯದ ಎಲ್ಲಿಯೂ ಇಲ್ಲ’ ಎಂದು ಹೇಳಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಸಚಿವರನ್ನು ಕೆಲವೇ ತಿಂಗಳಲ್ಲಿ ಮತ್ತೆ ಜಿಲ್ಲೆಗೆ ಕರೆಸಿ ಸುಮಾರು 50 ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುವುದು’ ಎಂದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದಶರಥ ಗುಂಡಗುರ್ತಿ, ಮುಖಂಡರಾದ ರಾಜು ವಾಡೇಕರ್, ಗೀತಾ ವಾಡೇಕರ್, ಶ್ಯಾಮ ನಾಟೀಕರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಂಜುನಾಥ ನಾಲವಾರಕರ್, ಕಾಂಗ್ರೆಸ್‌ ನಾಯಕಿ ಚಂದ್ರಿಕಾ ಪರಮೇಶ್ವರ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.