ADVERTISEMENT

ನೀತಿಸಂಹಿತೆ ನೆಪ; ಯುಪಿಎಸ್ಸಿ ತರಬೇತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 14:04 IST
Last Updated 5 ಏಪ್ರಿಲ್ 2021, 14:04 IST

ಕಲಬುರ್ಗಿ: ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ನೀಡಿ ಇಲ್ಲಿನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆ ತಯಾರಿಯ ತರಬೇತಿಗೆ ಅವಕಾಶ ನೀಡದೇ ಸೋಮವಾರ ವಾಪಸ್ ಕಳಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಚುನಾವಣೆ ನೀತಿ ಸಂಹಿತೆಗೂ ತರಬೇತಿಗೂ ಏನು ಸಂಬಂಧ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಿಸುವ ಉದ್ದೇಶದಿಂದ ಸಂಘವು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು.

ADVERTISEMENT

‘ಎಲ್ಲ ದಾಖಲಾತಿಗಳನ್ನು ಹಾಜರುಪಡಿಸಿ ಆಯ್ಕೆಯಾಗಿದ್ದೆ. ಸೋಮವಾರ ಕಲಬುರ್ಗಿಯ ಸೂಪರ್ ಮಾರ್ಕೆಟ್‌ನಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ರಾಯಚೂರು, ಬೀದರ್ ಜಿಲ್ಲೆಯಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಸದ್ಯಕ್ಕೆ ತರಬೇತಿ ನೀಡಲಾಗದು ಎಂದು ನನ್ನನ್ನು ವಾಪಸ್ ಕಳಿಸಿದರು’ ಎಂದು ರಾಯಚೂರಿನ ವಿದ್ಯಾರ್ಥಿನಿ ಖಾಜಾ ಬಾನು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರದಿಂದ ಆರು ತಿಂಗಳವರೆಗೆ ನಮ್ಮ ತರಬೇತಿ ನಡೆಯಬೇಕಿತ್ತು. ಅವರು ಸೂಚಿಸಿದ ಸಮಯಕ್ಕೆ ತೆರಳಿದಾಗ ಚುನಾವಣೆಯ ನೀತಿ ಸಂಹಿತೆ ಕಾರಣ ನೀಡಿದರು. ಏಪ್ರಿಲ್ 19ರಿಂದ ಮತ್ತೆ ತರಗತಿ ನಡೆಸುವುದಾಗಿ ತಿಳಿಸಿದ್ದಾರೆ’ ಎಂದು ಖಾಜಾ ಬಾನು ತಿಳಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.