ADVERTISEMENT

ರಸ್ತೆಗಳ ಅಭಿವೃದ್ಧಿಗೆ ₹150 ಕೋಟಿ: ಸಚಿವ ಬೈರತಿ ಬಸವರಾಜ

ಶುದ್ಧೀಕರಿಸಿದ ನೀರು ಉದ್ಯಾನ, ಕೆರೆ ತುಂಬಿಸಲು ಬಳಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 7:08 IST
Last Updated 25 ಜೂನ್ 2020, 7:08 IST
ಕಲಬುರ್ಗಿಯ ಕನ್ನಡ ಭವನದ ಎದುರು ಬುಧವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು
ಕಲಬುರ್ಗಿಯ ಕನ್ನಡ ಭವನದ ಎದುರು ಬುಧವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು   

ಕಲಬುರ್ಗಿ: ಆಳಂದ ರಿಂಗ್ ರಸ್ತೆ, ತಾಜ್‌ ಸುಲ್ತಾನಪುರ ರಸ್ತೆ ಸೇರಿದಂತೆ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಗೆ‌ ₹ 150 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ನಗರದಲ್ಲಿ ಬುಧವಾರ ವಿವಿಧ ಬಡಾವಣೆಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ’ಯಡಿ ನಗರದ ವಿವಿಧೆಡೆ ₹ 150 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಅಗತ್ಯ ಪ್ರಸ್ತಾವ ಸಲ್ಲಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

ಶುದ್ಧೀಕರಿಸಿದ ನೀರು ಉದ್ಯಾನಕ್ಕೆ: ‘ಶುದ್ಧೀಕರಿಸಿದ‌‌ ಚರಂಡಿ ನೀರನ್ನು ನಗರದಲ್ಲಿರುವ ಉದ್ಯಾನಗಳು ಹಾಗೂ ಕೆರೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಶುದ್ಧೀಕರಿಸಿದ ನೀರನ್ನು ಮರಳಿ ಭೀಮಾ ನದಿಗೆ ಬಿಡಲಾಗುತ್ತಿದೆ. ಆ ನೀರನ್ನು ಕುಡಿಯಲು ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಉದ್ಯಾನಗಳ ನಿರ್ವಹಣೆಗೆ ಬಳಸಲಾಗುವುದು. ಇದಕ್ಕಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸುವಂತೆ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ಸ್ಮಾರ್ಟ್ ಸಿಟಿ ಘೋಷಣೆ ಶೀಘ್ರ: ‘ಶೀಘ್ರವೇ ದೆಹಲಿಗೆ ತೆರಳಿ ಕಲಬುರ್ಗಿ, ಮೈಸೂರು, ಬಳ್ಳಾರಿ ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್‌ ಸಿಟಿ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳುವೆ. ಇದರಿಂದ ಕೇಂದ್ರದ ₹ 500 ಕೋಟಿ, ರಾಜ್ಯದ ₹ 500 ಕೋಟಿ ಅನುದಾನ ದೊರೆಯಲಿದೆ’ ಎಂದರು.

‘ಕಲಬುರ್ಗಿ ನಗರಾಭಿವೃದ್ಧಿ ‌ಪ್ರಾಧಿಕಾರದ ಅಧ್ಯಕ್ಷರ ನೇಮಕ ‌ಪ್ರಸ್ತಾವ ಬಂದಿಲ್ಲ. ಶಾಸಕರು ಹೆಸರನ್ನು ‌ಅಂತಿಮಗೊಳಿಸಿ ಕಳಿಸಿದರೆ ನಾಳೆಯೇ ನೇಮಕ ಮಾಡುತ್ತೇವೆ’ ಎಂದು‌ ಹೇಳಿದರು.

ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತವನ್ನು ಸೌಂದರ್ಯಿಕರಣ ಮಾಡುವಂತೆ ಪ್ರಸ್ತಾವ ಬಂದಿದ್ದು, ಅದನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಎಂದು

ನಗರಾಭಿವೃದ್ಧಿ ‌ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ನಿವೇಶನಗಳ ಪೈಕಿ ಶೇ 5 ರಷ್ಟನ್ನು ಪತ್ರಕರ್ತರಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ‌ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸಮ್ಮತಿಸಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ, ಮಹಾನಗರ ಪಾಲಿಕೆ ಆಯುಕ್ತ ‌ರಾಹುಲ್ ಪಾಂಡ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.