ADVERTISEMENT

ಪಾರದರ್ಶಕ ಚುನಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 9:09 IST
Last Updated 9 ಏಪ್ರಿಲ್ 2019, 9:09 IST

ಕಲಬುರ್ಗಿ: ‘ಚುನಾವಣೆಯಲ್ಲಿ ಹಣದ ಹರಿವನ್ನು ತಡೆಗಟ್ಟಬೇಕು ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು’ ಎಂದು ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ದಳದ ರಾಜ್ಯ ಘಟಕದ ಅಧ್ಯಕ್ಷ ಡಾ.ಎ.ಎಸ್.ಭದ್ರಶೆಟ್ಟಿ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ಚಲಾಯಿಸುವ ಮತದಾನದ ಆಧಾರದ ಮೇಲೆ ಸರ್ಕಾರ ರಚನೆಯಾಗುತ್ತದೆ. ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಒಳ್ಳೆಯ ಸರ್ಕಾರ ರಚಿಸಲು ಸಾಧ್ಯ. ಆದ್ದರಿಂದ ಮತದಾರರು ಭ್ರಷ್ಟರಾಗದೆ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು’ ಎಂದರು.

ರಾಜ್ಯ ವಕ್ತಾರ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರೈತರ ಖಾತೆಗೆ ಹಣ ಹಾಕುವುದಾಗಿ ಹೇಳುತ್ತಿವೆ. ಆ ಮೂಲಕ ರೈತರನ್ನು ಭ್ರಷ್ಟಗೊಳಿಸಲು ಮುಂದಾಗಿವೆ. ಆದ್ದರಿಂದ ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈಶ್ವರ ಖಂಡ್ರೆ ಅವರು ಈಗಾಗಲೇ ಶಾಸಕರಾಗಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತೆರವಾಗುವ ಶಾಸಕ ಸ್ಥಾನಕ್ಕೆ ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ. ಹೀಗೆ ಮಾಡುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪ ಮುಕರಂಬಿ, ಮುಖಂಡರಾದ ಗುರುಸ್ವಾಮಿ ಬಳ್ಳೊಳ್ಳಿ, ಶಿವಚಂದ್ರ ಬಾಕರೆ, ಶಾಂತಾ ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.