ಸೇಡಂ: 12ನೇ ಶತಮಾನದಲ್ಲಿ ಶರಣರು ಮೂಢನಂಬಿಕೆ, ಬಾಲ್ಯವಿವಾಹ, ಜಾತಿ ಪದ್ದತಿ, ಬಾಲ್ಯವಿವಾಹಗಳನ್ನು ದಿಕ್ಕರಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾದರು. ಅವರ ತಾತ್ವಿಕ ಚಿಂತನೆಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದ್ದವು. ಶರಣರು ನುಡಿದಂತೆ ನಡೆದರು. ಬರೆದ ವಚನಗಳೆಲ್ಲವು ಮಹಾನ್ ಗ್ರಂಥಗಳಾದವು. ಅಂತಹ ಮಹಾನ್ ಶರಣ ಉರಿಲಿಂಗ ಪೆದ್ದೀಶ್ವರ ನಾಮಾಂಕಿತದಲ್ಲಿ ಸ್ಥಾಪನೆಯಾದ ಮಠ ಇಂದು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೆ ಆದ ಮಹತ್ತರ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ ಎಂಬ ಮಾತು ಭಕ್ತವಲಯದಲ್ಲಿದೆ.
ಸೇಡಂನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಉರಿಲಿಂಗ ಪೆದ್ದೀಶ್ವರ ಮಠವು ವಿವಿಧ ಕಾರ್ಯಗಳ ಮೂಲಕ ಭಕ್ತರ ಮನ ಗೆದ್ದಿದೆ. ಶಿವಯೋಗಿ ಸ್ವಾಮೀಜಿ ಅವರಿಂದ ಸ್ಥಾಪತಗೊಂಡ ಮಠವು, ಭಕ್ತರಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಅರಿವಿನ ಜ್ಞಾನದ ದಾಸೋಹವನ್ನು ಉಣಬಡಿಸುತ್ತಿದೆ. ಶಿವಯೋಗಿ ಸ್ವಾಮಿ ಮತ್ತು ಗುರುಲಿಂಗ ಸ್ವಾಮಿಗಳ ತತ್ವ ವಿಚಾರಗಳು ಇಡಿ ಮನುಕುಲದ ಅಭ್ಯುದಯಕ್ಕೆ ಒಳಿತಾಗಿವೆ. ಜನರಲ್ಲಿ ಅರಿವು ಮತ್ತು ಅಕ್ಷರದ ಜ್ಞಾನ ಬಿತ್ತುತ್ತಿರುವ ಮಠವು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುತ್ತಿದೆ.
ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ, ವೈದ್ಯರು, ಎಂಜಿನಿಯರ್, ಶಿಕ್ಷಕರು, ಅಧಿಕಾರಿಗಳಾಗಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿ ವರ್ಷ ನಡೆಯುವ ಶಿವಯೋಗಿಶ್ವರರ ಜಾತ್ರಾ ಜಾತ್ರಾ ಮಹೋತ್ಸವದಲ್ಲಿ ಧರ್ಮ ಜಾಗೃತಿ, ವಚನಗೋಷ್ಠಿ, ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೂ ಸುಮಾರು 44 ಜಾತ್ರಾ ಮಹೋತ್ಸವಗಳನ್ನು ಆಚರಿಸಿಕೊಂಡಿದ್ದು, 45ನೇ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿದೆ. ಶ್ರೀಮಠವು ಪ್ರಾರಂಭಗೊಂಡ ನಂತರದಿಂದ ಇಲ್ಲಿಯವರೆಗೂ ಸುಮಾರು 20 ಸಾವಿರಕ್ಕೂ ಅಧಿಕ ಜನರಿಗೆ ಲಿಂಗ ದೀಕ್ಷೆ ನೀಡುವ ಮೂಲಕ ಲಿಂಗಧಾರಣೆ ಮುಂದಾಗಿದೆ. ಜಾತ್ಯತೀತವಾಗಿರುವ ಮಠಕ್ಕೆ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆಯುತ್ತಿದ್ದಾರೆ. ದುಶ್ಚಟಗಳನ್ನು ತ್ಯಜಿಸುವಂತಹ ಸಲಹೆ ನೀಡುವ ಶ್ರೀಗಳು ಶರಣರ ಚಿಂತನೆಗಳು, ಸಂವಿಧಾನದ ಆಶಯಗಳ ಈಡೇರಿಕೆಗೆ ಕಂಕಣ ಬದ್ದರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೋಡ್ಲಾ ಗ್ರಾಮದಲ್ಲಿರುವ ಉರಿಲಿಂಗ ಪೆದ್ದೀಶ್ವರ ಮಠವು ನಂಬಿದ್ದ ಭಕ್ತರಿಗೆ ಆಶ್ರಯದ ತಾಣವಾಗಿರುವುದರ ಜೊತೆಗೆ ಸಮಾಜೋದ್ಧಾರ್ಮಿಕ ಕಾರ್ಯ ಮಾಡುತ್ತಿದೆ.ಸಾಬಣ್ಣ ಮೈಲವಾರ ಭಕ್ತ
ಉರಿಲಿಂಗ ಪೆದ್ದೀಶ್ವರ ಮಠಕ್ಕೆ ಜ್ಞಾನಪ್ರಕಾಶ ಸ್ವಾಮೀಜಿ ಅವರು ಪೀಠಾಧಿಕಾರಿಯಾದ ನಂತರದಿಂದ ಶ್ರೀಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಉರಿಲಿಂಗ ಪೆದ್ದೀಶ್ವರ ಮಠವನ್ನು ಅಭಿವೃದ್ಧಿಪಡಿಸಿ ನವ ಸ್ಪರ್ಷ ನೀಡಿದ್ದಾರೆ. ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಕಾರ್ಯಗಳನ್ನು ಕೈಗೊಂಡು ಅಭಿವೃದ್ಧಿಯತ್ತ ಸಾಗಿಸುತ್ತಿದ್ದಾರೆ. ಶೈಕ್ಷಣಿಕ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಯುತ್ತಿರುವ ಮಠವು ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಅಣಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.