ADVERTISEMENT

ವಿಬಿ ಜಿ ರಾಮ್ ಜಿ ಯೋಜನೆಗೆ ₹ 95,692 ಕೋಟಿ ಹಂಚಿಕೆ: ಎ.ಎಸ್.ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:22 IST
Last Updated 3 ಫೆಬ್ರುವರಿ 2026, 5:22 IST
ಎ.ಎಸ್‌.ಪಾಟೀಲ
ಎ.ಎಸ್‌.ಪಾಟೀಲ   

ಕಲಬುರಗಿ: ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ವರ್ಷದಲ್ಲಿ 125 ದಿನಗಳ ಉದ್ಯೋಗ ನೀಡುವ ಉದ್ದೇಶದಿಂದ ಹಾಗೂ ಕೆಲಸ ಮಾಡಿದ ಒಂದು ವಾರದೊಳಗಾಗಿ ಕೂಲಿ ಪಾವತಿಸುವ ಬದ್ಧತೆಯಿಂದ ಪ್ರಸಕ್ತ ಬಜೆಟ್‌ನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ₹95,692 ಕೋಟಿ ಹಂಚಿಕೆ ಮಾಡಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ, ಕೂಲಿಗಾಗಿ ಕಾಳು ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಜಾರಿಗೆ ಬಂದಿದ್ದವು. ಆದರೆ, ವ್ಯಾಪಕ ಭ್ರಷ್ಟಾಚಾರ, ಸಕಾಲಕ್ಕೆ ಕೂಲಿ ಹಣ ಪಾವತಿಯಾಗದಿರುವ ಹಾಗೂ ಪಾರದರ್ಶಕತೆಯ ಕೊರತೆಯಿಂದಾಗಿ ಯೋಜನೆ ಜಾರಿಯಲ್ಲಿ ಲೋಪಗಳಿದ್ದವು. ಇದನ್ನು ಸರಿಪಡಿಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ‘ವಿಬಿ ಜಿ ರಾಮ್‌ ಜಿ’ ಕಾಯ್ದೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದ ಬಡವರಿಗೆ ನಿಶ್ಚಿತವಾಗಿ ಕೂಲಿ ಕೆಲಸ ಸಿಗಲಿದೆ. ಯೋಜನೆಯನ್ನು ಡಿಜಿಟಲೀಕರಣ ಮಾಡಿರುವುದರಿಂದ ಸಕಾಲದಲ್ಲಿ ವೇತನ ಪಾವತಿ ಆಗಲಿದೆ. ಆದರೂ, ಕಾಂಗ್ರೆಸ್‌ನವರು ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಚಿಪ್‌ಗಳನ್ನು ತಯಾರಿಸುವ ಸೆಮಿ ಕಂಡಕ್ಟರ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಅದಕ್ಕಾಗಿಯೇ ವಿಶೇಷ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಬೆಂಗಳೂರು–ಹೈದರಾಬಾದ್, ಪುಣೆ–ಹೈದರಾಬಾದ್, ಬೆಂಗಳೂರು–ಚೆನ್ನೈ ಮಧ್ಯೆ ಹೈಸ್ಪೀಡ್ ರೈಲುಗಳನ್ನು ಓಡಿಸುವ ಮೂಲಕ ವೇಗವಾಗಿ ಸರಕು ಸಾಗಣೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ’ ಎಂದರು.

ADVERTISEMENT

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಚಂದ್ರಶೇಖರ ಪರಸರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಿ ಚಿಚಕೋಟಿ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಕಲಬುರಗಿ ಸಂಸದರಿಗೆ ದಿಶಾ ಸಭೆ ನಡೆಸಲು ಪುರುಸೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಡಿಪಿ ಸಭೆ ನಡೆಸಲು ಸಮಯವಿಲ್ಲ. ಹೀಗಾದರೆ ಕೇಂದ್ರದ ಪುರಸ್ಕೃತ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಯ ಚರ್ಚೆ ನಡೆಯುವುದಾದರೂ ಹೇಗೆ?
ಡಾ.ಉಮೇಶ ಜಾಧವ್ ಮಾಜಿ ಸಂಸದ

‘ಜವಳಿ ಪಾರ್ಕ್‌ಗೆ ರಾಜ್ಯ ಸರ್ಕಾರ ನಿರಾಸಕ್ತಿ’

ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಬಳಿ ಪಿಎಂ ಮಿತ್ರ ಯೋಜನೆಯಡಿ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ₹500 ಕೋಟಿಯನ್ನೂ ಮೀಸಲಿಟ್ಟಿದೆ. ಆದರೆ ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹರಿಹಾಯ್ದರು. ಜವಳಿ ಪಾರ್ಕ್ ಕಾರ್ಯಾರಂಭ ಮಾಡಿದರೆ 1 ಲಕ್ಷ ಜನರಿಗೆ ಪ್ರತ್ಯಕ್ಷ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ದೊರೆಯುತ್ತದೆ. ಆದರೆ ರಾಜ್ಯ ಸರ್ಕಾರ ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿ ಉದ್ಯಮಿಗಳನ್ನು ಆಹ್ವಾನಿಸಬೇಕು. ಆದರೆ ಭೂಮಿ ಹಸ್ತಾಂತರ ಪ್ರಕ್ರಿಯೆಯೂ ವಿಳಂಬವಾಗಿದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.