ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಚುನಾವಣಾ ಕಣದಲ್ಲಿ ಮೂವರು ಅಭ್ಯರ್ಥಿಗಳಿದ್ದು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ 4 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾರ್ಯ ಸಮಿತಿಗೆ ಕೇವಲ ಮೂವರು ನಾಮಪತ್ರ ಸಲ್ಲಿಸಿದ್ದು ಮೂವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಣದಲ್ಲಿ ಭೀಮಾ ಮಿಷನ್ ಅಧ್ಯಕ್ಷ ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ನಡೆಸುತ್ತಿರುವ ಸಮಾಜದ ಹಿರಿಯ ಮುಖಂಡ ಕಲ್ಲೂರು ರೋಡ್ ಗ್ರಾಮದ ಭೀಮಶೆಟ್ಟಿ ಮುಕ್ಕಾ, ವಕೀಲರಾದ ಯುವ ಮುಖಂಡ ಮೋತಕಪಳ್ಳಿ ಗ್ರಾಮದ ಶರಣು ಪಾಟೀಲ ಮತ್ತು ಐನೊಳ್ಳಿಯ ಯುವ ಮುಖಂಡ ದಿನೇಶ ದುಗ್ಗಾಣಿ ಮಧ್ಯೆ ಪೈಪೋಟಿ ನಡೆಯುತ್ತಿದ್ದು ಭರಾಟೆಯ ಪ್ರಚಾರದಲ್ಲಿ ತೊಡಗಿದ್ದಾರೆ.
‘ಭೀಮಶೆಟ್ಟಿ ಮುಕ್ಕಾ ಅವರು ನಾನು ದಿವಂಗತ ಬಕ್ಕಪ್ಪ ಸೂಗೂರು ಅವರ ಜತೆಗೆ ಕೆಲಸ ಮಾಡಿದ್ದೇನೆ’ ಎಂದು ಹಿರಿಯರನ್ನು ಅವಲಂಬಿಸಿದ್ದರೆ, ಯುವ ಮುಖಂಡ ಶರಣು ಪಾಟೀಲ ಯುವಕರಿಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡುತ್ತಿದ್ದಾರೆ. ಈ ಮಧ್ಯೆ ಐನೊಳ್ಳಿಯಲ್ಲಿ ಅಧಿಕ ಮತದಾರರಿರುವುದರಿಂದ ದಿನೇಶ ದುಗ್ಗಾಣಿ ಸ್ಥಳೀಯ ಮತದಾರರನ್ನು ಅವಲಂಬಿಸಿದ್ದಾರೆ. ಹೀಗಾಗಿ ವಿಜಯದ ಮಾಲೆ ಯಾರಿಗೆ ಒಲಿಯುತ್ತದೆ ಎಂಬುದು ನಿಗೂಢವಾಗಿದೆ.
ಮೂವರು ಅಭ್ಯರ್ಥಿಗಳ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಯ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಜುಲೈ 21ರಂದು ಮತದಾನ ನಡೆಯಲಿದ್ದು, ಅದೇ ದಿನ ಗುರು ಪೂರ್ಣಿಮೆ ಇರುವುದರಿಂದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ.
‘ಮಹಾಸಭೆಯ ಚರಿತ್ರೆಯಲ್ಲಿ ಒಮ್ಮೆಯೂ ಚುನಾವಣೆ ನಡೆದಿರಲಿಲ್ಲ. ಈವರೆಗೆ ಒಮ್ಮತದಿಂದ ಆಯ್ಕೆ ನಡೆದಿತ್ತು. ಆದರೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು ಅಖಾಡ ಸಜ್ಜಾಗಿದೆ. ಈ ನಡುವೆ ಎರಡು ಬಾರಿ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದರೂ ಸಾಧ್ಯವಾಗಿಲ್ಲ. ಒಳ ಒಪ್ಪಂದ ಮಾಡಿಸಿ ಅಧಿಕಾರ ಹಂಚಿಕೆ ವಿಷಯ ಪ್ರಸ್ತಾಪವಾದಾಗ ಅಭ್ಯರ್ಥಿಗಳು ಮೊದಲ ಅವಧಿಗೆ ಪಟ್ಟು ಹಿಡಿದಿದ್ದರಿಂದಲೂ ಸಂಧಾನ ಕಗ್ಗಂಟಾಗಿದ್ದರಿಂದ ಚುನಾವಣೆ ಅನಿವಾರ್ಯವಾಗಿದೆ. ಮೂವರು ಅಭ್ಯರ್ಥಿಗಳಿಗೆ ಒಳ ಏಟು ಬೀಳುವುದು ನಿಶ್ಚಿತವಾಗಿದ್ದು ಇದು ಯಾರಿಗೆ ಪೆಟ್ಟು ಕೊಡುತ್ತದೆ ಎಂಬುದು ನಿಗೂಢವಾಗಿದೆ.
ತಾಲ್ಲೂಕಿನಲ್ಲಿ ಮಹಾಸಭೆಯ 385 ಮತದಾರರು ಇದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮತದಾರರು ನಿಧನರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ 10ಕ್ಕೂ ಹೆಚ್ಚು ಹೆಸರುಗಳು ಬೇರೆ ತಾಲ್ಲೂಕಿನ ಮತದಾರರ ಹೆಸರು ಸೇರಿವೆ. ಇದರ ಜತೆಗೆ ಕೆಲವು ಹೆಸರು ಎರಡು ಬಾರಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.