ಕಲಬುರಗಿ: ಕಲಬುರಗಿ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾರಿಗೆ ಅಧಿಕಾರಿಗಳು 2 ವರ್ಷಗಳ ಅವಧಿಯಲ್ಲಿ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಮಾಲೀಕರಿಂದ ₹ 5.93 ಕೋಟಿ ದಂಡ ವಸೂಲಿ ಮಾಡಿದ್ದಾರೆ.
ಕಲಬುರಗಿ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಜಿಲ್ಲಾ ಸಾರಿಗೆ ಕಚೇರಿಗಳು, ತನಿಖಾ ಠಾಣೆಗಳು ಸೇರಿ 12 ಕಚೇರಿಗಳು ಬರುತ್ತವೆ. ಕಲಬುರಗಿ, ಹಗರಿ (ಹಗರಿಬೊಮ್ಮನಹಳ್ಳಿ) ತನಿಖಾ ಠಾಣೆ, ಹೊಸಪೇಟೆ, ರಾಯಚೂರು, ಯಾದಗಿರಿ, ಬಸವಕಲ್ಯಾಣ ಕಚೇರಿಗಳ ವ್ಯಾಪ್ತಿಯಲ್ಲಿ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ ಪ್ರಕರಣಗಳು ವಿಪರೀತವಾಗಿವೆ.
ಹೊಗೆ ಉಗುಳುವ ಮತ್ತು ಕರ್ಕಶ ಶಬ್ದದ ವಾಹನಗಳ ಕಾಟಕ್ಕೆ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಜನರ ನೆಮ್ಮದಿ ಹಾಗೂ ವಾತಾವರಣಕ್ಕೆ ಭಂಗ ತರುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿಲ್ಲ.
2023–24ರಲ್ಲಿ 5,682 ವಾಯುಮಾಲಿನ್ಯ ಪ್ರಕರಣಗಳು ದಾಖಲಾಗಿದ್ದವು. 2024–25ಕ್ಕೆ ಅವುಗಳ ಸಂಖ್ಯೆ 7,843ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ ಡೀಸೆಲ್ ಚಾಲಿತ ವಾಹನಗಳ ಸಂಖ್ಯೆಯೇ ಅತ್ಯಧಿಕ (4,547 ಮತ್ತು 6,398) ಪ್ರಕರಣಗಳಿವೆ. ಪೆಟ್ರೋಲ್ ಚಾಲಿತ ವಾಹನಗಳ ಪ್ರಕರಣಗಳು ಕ್ರಮವಾಗಿ 1,140 ಹಾಗೂ 1,445 ಆಗಿವೆ.
ಅದೇ ರೀತಿ ಶಬ್ದ ಮಾಲಿನ್ಯ ಪ್ರಕರಣಗಳು 2023–24ರಲ್ಲಿ 3,493 ಪ್ರಕರಣಗಳು ದಾಖಲಾಗಿದ್ದವು. ಮರು ವರ್ಷದಲ್ಲಿ ಅವುಗಳ ಸಂಖ್ಯೆ 4,114ಕ್ಕೆ ತಲುಪಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗಳ ವಾಹನಗಳಿಂದ ಸಾರಿಗೆ ಅಧಿಕಾರಿಗಳು ₹ 5.93 ಕೋಟಿ ದಂಡ ವಸೂಲಿ ಮಾಡಿದ್ದಾರೆ ಎಂಬುದು ಕಲಬುರಗಿ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿ ನೀಡಿದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.