ADVERTISEMENT

ಸೇವೆ ಕಾಯಂ, ನೇರ ವೇತನ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 14:53 IST
Last Updated 20 ಮಾರ್ಚ್ 2023, 14:53 IST
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು–ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು–ಪ್ರಜಾವಾಣಿ ಚಿತ್ರ   

ಕಲಬುರಗಿ: ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರ ಮತ್ತು ಸಹಾಯಕರನ್ನು ಕೂಡಲೇ ಕಾಯಂಗೊಳಿಸಿ, ನೇರವಾಗಿ ವೇತನ ಪಾವತಿಸುವಂತೆ ಆಗ್ರಹಿಸಿ ಎಐಸಿಸಿಟಿಯು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ಪದ್ಧತಿ ನಿಲ್ಲಿಸಬೇಕು. ಐಪಿಡಿ ಸಾಲಪ್ಪ ಅವರ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಬೇಡಿಕೆ ಇರಿಸಿದ ಚಾಲಕರು, ಬೆಳಿಗ್ಗೆಯಿಂದ ಕೆಲಸ ಸ್ಥಗಿತಗೊಳಿಸಿದರು. ಎಲ್ಲ ಬಗೆಯ ಪೌರ ಕಾರ್ಮಿಕರು, ಸಹಾಯಕರು ಹೋರಾಟಕ್ಕೆ ಕೈಜೋಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಮಾತನಾಡಿ, ‘ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ 15,000ಕ್ಕೂ ಹೆಚ್ಚು ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ನಗರ, ಪಟ್ಟಣಗಳ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಚಾಲಕರಿಗೆ ಕನಿಷ್ಠ ಕೂಲಿ, ನ್ಯಾಯಯೋಚಿತ ಸೌಕರ್ಯಗಳು ಸಿಗುತ್ತಿಲ್ಲ. ಚಾಲಕರನ್ನು ನಂಬಿ ಬದುಕುತ್ತಿರುವ ಕುಟುಂಬಗಳು ನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲು ಆಗದಂತಹ ಸ್ಥಿತಿಗೆ ತಲುಪಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸ್ವೀಪರ್‌ಗಳು, ಘನತ್ಯಾಜ್ಯ ನಿರ್ವಹಣೆ ವಾಹನ ಚಾಲಕರು, ಸಹಾಯಕರು, ಲೋಡರ್ಸ್ ಸೇರಿ ಎಲ್ಲ ಪೌರಕಾರ್ಮಿಕರು 2022ರ ಜು.1ರಿಂದ ಅನಿರ್ದಿಷ್ಟಕಾಲ ಮುಷ್ಕರ ನಡೆಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇರ ಪಾವತಿ ವ್ಯವಸ್ಥೆ ತರುವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಪ್ರಸಾದ್ ಅವರು ಸಿ.ಎಂ ನಿರ್ದೇಶನದ ಮೇರೆಗೆ ಕಾರ್ಮಿಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ’ ಎಂದು ಹೇಳಿದರು.

ಕೂಡಲೇ ಸರ್ಕಾರ ಎಚ್ಚೆತ್ತು ನಮ್ಮ ಭರವಸೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಭೋವಿ, ಮುಖಂಡರಾದ ಸುನೀಲ್ ಮಾನ್ಪಡೆ, ಗಿರಿಮಲ ಶಾಮರಾವ್, ಗೀತಾ, ಶಿವಾಜಿ, ಸುರೇಶ್, ಸೋಮಶೇಖರ ಸೇರಿ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.