ADVERTISEMENT

ಮರಳು ಗಣಿಗಾರಿಕೆ ವೀಕ್ಷಿಸದೆ ಹಿಂದಿರುಗಿದ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರ ಧಿಕ್ಕಾರದ ಬಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 16:24 IST
Last Updated 18 ಏಪ್ರಿಲ್ 2025, 16:24 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿ ವೀಕ್ಷಣೆಗೆಂದು ಶುಕ್ರವಾರ ಸೇತುವೆ ಮೇಲೆ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು ಮರಳು ಗಣಿಗಾರಿಕೆ ಕುರಿತು ಮಾಹಿತಿ ನೀಡಿದರು
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿ ವೀಕ್ಷಣೆಗೆಂದು ಶುಕ್ರವಾರ ಸೇತುವೆ ಮೇಲೆ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು ಮರಳು ಗಣಿಗಾರಿಕೆ ಕುರಿತು ಮಾಹಿತಿ ನೀಡಿದರು   

ಚಿತ್ತಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶುಕ್ರವಾರ ತಾಲ್ಲೂಕಿನ ಭಾಗೋಡಿ ಗ್ರಾಮದ ಹತ್ತಿರದ ಕಾಗಿಣಾ ನದಿಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ವೀಕ್ಷಣೆಗೆಂದು ಸೇತುವೆ ಮೇಲೆ ನಿಂತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು. ಸಚಿವ ಪ್ರಿಯಾಂಕ್ ಖರ್ಗೆ ಪರವಾದ ಜಯಘೋಷ ಹಾಕಿದರು. ಆಗ ವಿಜಯೇಂದ್ರ ಅವರು ಸೇತುವೆಯಿಂದ ತಕ್ಷಣ ನಿರ್ಗಮಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು ಕಾಗಿಣಾ ನದಿಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ, ಮರಳು ಅಕ್ರಮ ದಂಧೆಯ ಕುರಿತು ಪಕ್ಷದ ರಾಜ್ಯಾಧ್ಯಕ್ಷರಿಗೆ ಮಾಹಿತಿ ನೀಡಿ, ‘ಸುಮಾರು ಐದು ನೂರು ಟಿಪ್ಪರ್ ಬಳಕೆ ಮಾಡಲಾಗುತ್ತಿದೆ. ಸಾವಿರ ಕೋಟಿಯಷ್ಟು ಮೊತ್ತದ ಮರಳು ಎತ್ತಿ ಸಾಗಿಸಲಾಗಿದೆ. ಮರಳು ಲೂಟಿ ಮಾಡಲಾಗುತ್ತಿದೆ. ಯಾರಾದರೂ ಪ್ರಶ್ನಿಸಿದರೆ ಬೆದರಿಕೆಯ ಕರೆ ಮಾಡಿ ಹೆದರಿಸುವುದು ನಡೆಯುತ್ತಿದೆ. ಜಿಲ್ಲಾಡಳಿತ ಮರಳು ದಂಧೆಯಲ್ಲಿ ಶಾಮೀಲಾಗಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ದಾಖಲಿಸಬೇಕು’ ಎಂದರು.

ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ದೇವಿಂದ್ರ ಅರಣಕಲ್ ಅವರು ಇತರೆ ಕಾರ್ಯಕರ್ತರೊಂದಿಗೆ ಸ್ಥಳಕ್ಕಾಗಮಿಸಿ, ‘ಮರಳು ಗಣಿಗಾರಿಕೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅನುಮತಿ ನೀಡಲಾಗಿದೆ. ಬಿಜೆಪಿ ಸರ್ಕಾರವೇ ಮರಳು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳುತ್ತಾ ಅಭಿವೃದ್ಧಿಯ ಹರಿಕಾರ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಯವಾಗಲಿ, ಬಿಜೆಪಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ADVERTISEMENT

ಘೋಷಣೆ ಮೊಳಗುತ್ತಿದ್ದಂತೆ ವಿಜಯೇಂದ್ರ ಅವರು ಮುಜುಗರಕ್ಕೆ ಒಳಗಾಗಿ ತಕ್ಷಣ ಕಾರಿನತ್ತ ತೆರಳಿ ಕಲಬುರಗಿಯತ್ತ ಪ್ರಯಾಣ ಬೆಳೆಸಿದರು.  ಬಿಜೆಪಿ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸದಸ್ಯರು ಕೆಆರ್‌ಐಡಿಎಲ್ ಮರಳು ದಾಸ್ತಾನು ಅಡ್ಡೆಯಲ್ಲಿ ದಾಸ್ತಾನು ಮಾಡಿರುವ ಬೃಹತ್ ಮರಳು ಸಂಗ್ರಹ ದಿಬ್ಬವನ್ನು ನೋಡಿಯೂ ನೋಡದಂತೆ ವಾಪಸಾದರು. ಖಾಸಗಿ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೂ ಭೇಟಿ ನೀಡಲಿಲ್ಲ. ಇತ್ತೀಚೆಗೆ ಬೆಳಗುಂಪಾ ಗ್ರಾಮದ ಶ್ರೀಧರನ ಶವ ಪತ್ತೆಯಾದ ಮರಳು ತೆಗೆದ ಗುಂಡಿಯ ವೀಕ್ಷಣೆಯೂ ಮಾಡದೆ ಮರಳಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಉಪಾಧ್ಯಕ್ಷ ಬಸವರಾಜ ಬೆಣ್ಣುರಕರ್, ಮುಖಂಡ ಅವ್ವಣ್ಣ ಮ್ಯಾಕೇರಿ, ಸುರೇಶ ರಾಠೋಡ್ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.