
ಚಿಂಚೋಳಿ: ‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಾರ್ಯಗಳು ಸಹಿಸದ ಶಕ್ತಿಗಳು ಅವರ ವಿರುದ್ಧ ಕುತಂತ್ರ ನಡೆಸಿ ಬಾಲಸುಟ್ಟುಕೊಂಡಿವೆ’ ಎಂದು ಚಿಮ್ಮಾಈದಲಾಯಿ ಸಿದ್ದರಾಮೇಶ್ವರ ಹಿರೇಮಠದ ವಿಜಯಮಹಾಂತೇಶ್ವರ ಶಿವಾಚಾರ್ಯರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಮ್ಮಿಕೊಂಡ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಒಳ್ಳೆಯ ಕೆಲಸ ಮಾಡುವವರಿಗೆ, ಪ್ರಾಮಾಣಿಕರಿಗೆ, ಜನರ ಬಗೆಗೆ ವಿಶೇಷ ಕಾಳಜಿ ಮೈಗೂಡಿಸಿಕೊಂಡು ಜನ ಸೇವೆ ಮಾಡುವವರಿಗೆ ಕಂಟಕಗಳು ಜಾಸ್ತಿ ಎದುರಾಗುತ್ತವೆ. ಇವುಗಳಿಂದ ಎದೆಗುಂದದೇ ಮುಂದೆ ಸಾಗಿದರೆ ಸತ್ಯ ಬಯಲಾಗಿ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ’ ಎಂದರು.
ಯೋಜನೆಯ ಜಿಲ್ಲಾ ನಿರ್ದೆಶಕ ಗಣಪತಿ ಮಾಳಂಜಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮೀತವಾಗಿಲ್ಲ. ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ವಾರ್ಷಿಕ ಶೇ 7 ಬಡ್ಡಿದರದಲ್ಲಿ ಮಹಿಳೆಯರ ಉಳಿತಾಯದ ಹಣವನ್ನು ಸ್ವಾವಲಂಬಿ ಜೀವನ ನಡೆಸಲು ಸಾಲ ರೂಪದಲ್ಲಿ ನೀಡುತ್ತದೆ. ಅಲ್ಲದೆ ಹಲವು ಬಗೆಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಶ್ರೀದೇವಿ ಅಶೋಕ ಪಾಟೀಲ, ವಕೀಲ ಶ್ರೀಮಂತ ಕಟ್ಟಿಮನಿ, ಜನ ಜಾಗೃತಿ ವೇದಿಕೆ ಉಪಾಧ್ಯಕ್ಷೆ ನರಸಮ್ಮ ಅವುಂಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ್ವರ ಮಠದ ಸದ್ಭಕ್ತ ಮಂಟಳಿ ಅಧ್ಯಕ್ಷ ಸಂಗಪ್ಪ ಪಾಲಾಮೂರ, ಪುರಸಭೆ ಮಾಜಿ ಅಧ್ಯಕ್ಷೆ ಜಗದೇವಿ ಗಡಂತಿ, ಮಾಜಿ ಸದಸ್ಯೆ ರಾಧಾಬಾಯಿ ಓಲಗೇರಿ, ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಸಹಾಯಕ ಸಬ್ ಇನ್‌ಸ್ಪೆಕ್ಟರ್ ರವಿ ಸ್ವಾಮಿ, ಅಮರ ಲೊಡ್ಡನೋರ್, ರೇವಣಸಿದ್ದಪ್ಪ ಪಡಶೆಟ್ಟಿ ಮೊದಲಾದವರು ಇದ್ದರು.
ಯೋಜನಾಧಿಕಾರಿ ಶಕುಂತಲಾ ಸ್ವಾಗತಿಸಿದರು. ಸತೀಶ ಕೆ.ಎಚ್ ನಿರೂಪಿಸಿದರು. ಶಿವಾನಂದ ವಂದಿಸಿದರು. ಇದಕ್ಕೂ ಮೊದಲು ವರ ಮಹಾಲಕ್ಷ್ಮಿ ಪೂಜೆ ಸಲ್ಲಿಸಿ ಅಕ್ಷತೆ ಹಾಕಿದರು. ನಂತರ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಮಹಿಳೆಯರಿಗೆ ಅರಿಷಿಣ ಕುಂಕುಮ, ಕುಪ್ಪಸ ಬಳೆ ಕೊಟ್ಟು ಉಡಿ ತುಂಬುವ ಶಾಸ್ತ್ರ ನಡೆಸಿದರು. ನಂತರ ಪ್ರಸಾದ ಸ್ವೀಕರಿಸಿ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.