ADVERTISEMENT

ಕಲಬುರಗಿ: ಪ್ರಖರ ಬಿಸಿಲಿಗೆ ಬಸವಳಿದ ಜನ

ಬೇಸಿಗೆಯಲ್ಲಿ 44 ಸೆಲ್ಸಿಯಸ್‌ ತಾಪಮಾನ ದಾಖಲಾಗುವ ಸಾಧ್ಯತೆ

ಓಂಕಾರ ಬಿರಾದಾರ
Published 5 ಮಾರ್ಚ್ 2024, 6:15 IST
Last Updated 5 ಮಾರ್ಚ್ 2024, 6:15 IST
ಕಲಬುರಗಿ ನಗರದ ಕೋರ್ಟ್‌ ರಸ್ತೆಯಲ್ಲಿ ಸೋಮವಾರ ಲಿಂಬೆಹಣ್ಣಿನ ಜ್ಯೂಸ್‌ ಕುಡಿಯಲು ಕಾಯುತ್ತಿರುವ ಜನ
ಕಲಬುರಗಿ ನಗರದ ಕೋರ್ಟ್‌ ರಸ್ತೆಯಲ್ಲಿ ಸೋಮವಾರ ಲಿಂಬೆಹಣ್ಣಿನ ಜ್ಯೂಸ್‌ ಕುಡಿಯಲು ಕಾಯುತ್ತಿರುವ ಜನ   

ಕಲಬುರಗಿ: ಬೆಳಿಗ್ಗೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು, ಅಂತರ್ಜಲ ಮಟ್ಟ ಕಡಿಮೆಯಾಗಿ ಬತ್ತಿರುವ ಬೊರವೆಲ್‌ಗಳು, ಸೂರ್ಯನ ಪ್ರಖರತೆ ತಾಳದೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬರುವ ವಿದ್ಯಾರ್ಥಿಗಳು, ತಂಪು ಪಾನಿಯಗಳ ಮೊರೆಹೂಗುತ್ತಿರುವ ಜನ...

ಈ ದೃಶ್ಯಗಳು ಕಲಬುರಗಿ ನಗರದಲ್ಲಿ ಈಗ ಕಂಡು ಬರುವುದು ಸಾಮಾನ್ಯವಾಗಿದೆ. ಮಳೆಯ ಕೊರತೆಯಿಂದಾಗಿ ತಾಪಮಾನ ಏರಿಕೆಯಾಗುತ್ತಿದ್ದು, ಮಾರ್ಚ್ 4ರಂದು 38.6 ಸೆಲ್ಸಿಯಸ್‌ ದಾಖಲಾಗಿದೆ. ಜನರು ಬಿಸಿಲಿನ ಝಳ ತಡೆಯಲು ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.

ಈ ವರ್ಷದ ಫೆಬ್ರುವರಿ ತಿಂಗಳಿದಂಲೇ ಬೇಸಿಗೆ ಆರಂಭವಾಗಿದ್ದು, ಎಳೆನೀರು, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಲಿಂಬೂ ಸೋಡಾ ಸೇರಿ ವಿವಿಧ ಪಾನೀಯಗಳ ಮಾರಾಟವೂ ಭರದಿಂದ ಸಾಗಿದೆ. ಎಳೆನೀರಿಗೆ ಬೇಡಿಕೆ ಹೆಚ್ಚಾಗಿದೆ. ಬೇರೆ ಪ್ರದೇಶದಿಂದ ಕಲಬುರಗಿಗೆ ಎಳೆನೀರು ಕಾಯಿಗಳನ್ನು ತರಿಸಲಾಗುತ್ತಿದೆ. ಒಂದಕ್ಕೆ ₹30ರಿಂದ 60ರವರೆಗೂ ಮಾರಾಟ ಮಾಡಲಾಗುತ್ತಿದೆ.

ADVERTISEMENT

‘ಬರಗಾಲದಿಂದ ತೆಂಗು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿಲ್ಲ. ಇರುವ ತೆಂಗಿನ ಕಾಯಿಗೆ ಬಹು ಬೇಡಿಕೆ ಬಂದಿದೆ. ನಾವೇ ₹30ರಿಂದ ₹40ರವರೆಗೆ ಖರೀದಿ ಮಾಡುತ್ತಿದ್ದೇವೆ. ಬೆಲೆ ಏರಿಕೆ ಅನಿವಾರ್ಯವಾಗಿದೆ’ ಎನ್ನುತ್ತಾರೆ ವ್ಯಾಪಾರಿ ಈರಣ್ಣ.

ಹಣ್ಣಿನ ಬೆಲೆಯೂ ಏರಿಕೆ:

ಕಲ್ಲಂಗಡಿ ಹಣ್ಣಿನ ಬಳಕೆ ಹೆಚ್ಚಾಗಿರುವುದರಿಂದ ಒಂದಕ್ಕೆ ₹50ರಿಂದ ₹120ರವರೆಗೆ ಮಾರಾಟ ಆಗುತ್ತಿವೆ. ಲಿಂಬೆಹಣ್ಣಿನ ದರ ದಿಢೀರ್‌ ಏರಿಕೆಯಾಗಿದೆ. ಒಂದು ಕಾಯಿಗೆ ₹5ರಿಂದ ₹6ಗೆ ಮಾರಾಟವಾಗುತ್ತಿದೆ. ದಾಳಿಂಬೆ, ಬಾಳೆಹಣ್ಣು ಸೇರಿ ಇತರ ಹಣ್ಣುಗಳ ಬೆಲೆಯೂ ಅಧಿಕವಾಗಿದೆ.

ಜನರ ಪ್ರಯಾಸ: ಮುಂಜಾನೆ ಸ್ವಲ್ಪ ತಂಪಾದ ವಾತಾವರಣ ಇರುತ್ತದೆ. ಬೆಳಿಗ್ಗೆ 10 ಗಂಟೆಗೆ ಭೂಮಿ ಕಾಯಲು ಆರಂಭವಾಗುತ್ತದೆ. ಮಧ್ಯಾಹ್ನ 12ರ ನಂತರ ಮಧ್ಯಾಹ್ನ 3 ಗಂಟೆಗೆ ಹೊರಗಡೆ ಓಡಾಡಲು ಸಾಧ್ಯವಾಗದಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯ ಕೆಲಸಗಳಿಗೆ ಹೋಗಬೇಕಾದವರು ಛತ್ರಿ ಹಿಡಿದು ಅಥವಾ ಟೊಪ್ಪಿ, ಬಟ್ಟೆ, ಶಾಲನ್ನು ತಲೆಗೆ ಕಟ್ಟಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.

ವಿದ್ಯಾರ್ಥಿಗಳು ಹೈರಾಣ:

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ  ಆರಂಭವಾಗಿದೆ. ಈ ಪರೀಕ್ಷೆ ಮುಗಿದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳು ಬಿಸಿಲ ಧಗೆಯಿಂದ ಬಳಲುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಲಬುರಗಿಯಲ್ಲಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿಯರು ಮುಖಕ್ಕೆ ಬಟ್ಟೆ ಸುತ್ತಿಕೊಂಡಿರುವುದು
ಬಸವರಾಜ ಬಿರಾದಾರ ತಾಂತ್ರಿಕ ಅಧಿಕಾರಿ ಹವಾಮಾನ ಇಲಾಖೆ
ಮಾರ್ಚ್‌ 4ರಂದು 38.6 ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕಳೆದ ವರ್ಷಕ್ಕಿಂತ 2 ಸೆಲ್ಸಿಯಸ್‌ ಹೆಚ್ಚಾಗಿದೆ. ಮಾರ್ಚ್‌ ಏಪ್ರಿಲ್‌ನಲ್ಲಿ ಬಿಸಿಲಿನ ಝಳ ಜಾಸ್ತಿ ಇರಲಿದೆ. 44 ಸೆಲ್ಸಿಯಸ್‌ ತಾಪಮಾನ ದಾಖಲಾಗಬಹುದು.
ಬಸವರಾಜ ಬಿರಾದಾರ ತಾಂತ್ರಿಕ ಅಧಿಕಾರಿ ಹವಾಮಾನ ಇಲಾಖೆ

ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಲಹೆ

‘ಹೆಚ್ಚು ನೀರು ಕುಡಿಯುವುದು ಹಾಗೂ ಹೆಚ್ಚು ನೀರಿನ ಅಂಶಗಳು ಇರುವ ಪದಾರ್ಥ ಸೇವನೆ ಮಾಡುವುದು. ಛತ್ರಿ ಟೋಪಿ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಬೇಕು’ ಎಂದು ಜಿಲ್ಲಾ ವೈದ್ಯಾಧಿಕಾರಿ ರತಿಕಾಂತ್‌ ಸ್ವಾಮಿ ತಿಳಿಸಿದ್ದಾರೆ. ಬಿಸಿಗಾಳಿ ಒತ್ತಡ ಹಾಗೂ ಬಿಸಿಗಾಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದೆ. ಆದ್ದರಿಂದ ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು ಗರ್ಭಿಣಿಯರು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ತುರ್ತು ಸೇವೆಗೆ 108 ಅಥವಾ 102 ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.