ADVERTISEMENT

ಮಟಕಿ ಗ್ರಾಮದಲ್ಲಿ ನೀರಿಗಾಗಿ ಪರದಾಟ

ಅತಿವೃಷ್ಟಿಗೆ ಒಡೆದ ಕೆರೆಗೆ ಕುಸಿದ ಅಂತರ್ಜಲ ಮಟ್ಟ

​ಪ್ರಜಾವಾಣಿ ವಾರ್ತೆ
Published 5 ಮೇ 2021, 14:44 IST
Last Updated 5 ಮೇ 2021, 14:44 IST
ಆಳಂದ ತಾಲ್ಲೂಕಿನ ಮಟಕಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸರದಿಯಲ್ಲಿ ಕಾಯ್ದಿಟ್ಟ ಖಾಲಿ ಕೊಡಗಳು
ಆಳಂದ ತಾಲ್ಲೂಕಿನ ಮಟಕಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸರದಿಯಲ್ಲಿ ಕಾಯ್ದಿಟ್ಟ ಖಾಲಿ ಕೊಡಗಳು   

ಮಟಕಿ(ಆಳಂದ): ತಾಲ್ಲೂಕಿನ ಮಟಕಿ ಗ್ರಾಮದಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು, ಗ್ರಾಮಸ್ಥರು ದಿನವೀಡಿ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯು ನೀರು ಪೂರೈಸುವ ವ್ಯವಸ್ಥೆಯೂ ಯಶಸ್ವಿಯಾಗಿಲ್ಲ.

5 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಮಟಕಿ ಗ್ರಾಮದ ನೀರಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿವೆ. ಗ್ರಾಮದ ಸಮೀಪದಲ್ಲಿದ್ದ ಕೆರೆ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಒಡೆದು ಸಂಪೂರ್ಣ ಹಾಳಾಯಿತು. ಬೇಸಿಗೆಯ ಬಿಸಿಲು ಹೆಚ್ಚಿದಂತೆ ಸುತ್ತಲಿನ ಅಂತರ್ಜಲದ ಮಟ್ಟವು ಇನ್ನಷ್ಟು ಕುಸಿಯತೊಡಗಿದೆ. ಗ್ರಾಮದಲ್ಲಿನ 6 ಕೊಳವೆ ಬಾವಿ ಮತ್ತು 2 ತೆರೆದಬಾವಿಗಳಲ್ಲೂ ನೀರಿಲ್ಲ.

ಗ್ರಾಮ ಪಂಚಾಯಿತಿಯಿಂದ ಕಳೆದ ವಾರ ಸರ್ಕಾರಿ ಶಾಲೆಯ ಸಮೀಪದಲ್ಲಿ ಹಾಗೂ ವೆಂಕಟೇಶ ನಗರದಲ್ಲಿ ಎರಡು ಕೊಳವೆ ಬಾವಿ ಕೊರೆದರೂ ಪ್ರಯೋಜನವಾಗಲಿಲ್ಲ. ಒಂದು ಕೊಳವೆ ಬಾವಿಯಲ್ಲಿ ಮಾತ್ರ ಅಲ್ಪಪ್ರಮಾಣದಲ್ಲಿ ನೀರು ಬಂದಿವೆ.

ADVERTISEMENT

ಗ್ರಾಮದ ಕೆಲ ಮನೆಗಳಲ್ಲಿನ ಖಾಸಗಿ ಕೊಳವೆ ಬಾವಿಯಿಂದಲೂ ನೀರು ಪಡೆದು ಸಮೀಪದ ಮನೆಗಳಿಗೆ ನೀರು ಸರಬರಾಜು ಮಾಡಲು ಪಂಚಾಯಿತಿ ಮುಂದಾಯಿತು. ಆದರೆ, ಈಗ ಆ ಕೊಳವೆಬಾವಿಗಳು ಸಹ ಕೈಕೊಟ್ಟಿವೆ. ಅದಕ್ಕೆ ಗ್ರಾಮ ಪಂಚಾಯಿತಿಯು ಗ್ರಾಮಸ್ಥರ ನೀರಿನ ಸಮಸ್ಯೆ ಬಗೆಹರಿಸಲು ಅನಿವಾರ್ಯವಾಗಿ ಗ್ರಾಮದ ಪಂಚಾಯಿತಿ ಸದಸ್ಯ ನಂದಕುಮಾರ ಪಾಟೀಲ ಹಾಗೂ ಖಂಡಪ್ಪ ಪೂಜಾರಿ ಅವರ ತೋಟದಲ್ಲಿನ ಕೊಳವೆ ಬಾವಿಯಿಂದ ನೀರು ಪೂರೈಕೆಗೆ ಮುಂದಾಗಿದೆ. ಇದರಿಂದ ಗ್ರಾಮದ ಅರ್ಧ ಭಾಗದಲ್ಲಿ ನೀರು ಪೂರೈಕೆ ಸಾಧ್ಯವಾಗಿದೆ.

ಹೊಸ ವಾರ್ಡ್‌ನಲ್ಲಿನ ಮನೆಗಳಿಗೆ ನೀರು ಪೂರೈಕೆ ಸಮಸ್ಯೆ ಎದುರಾಗಿದೆ. ಸರ್ಕಾರಿ ಶಾಲೆ, ದರ್ಗಾ ಹಾಗೂ ನಿರಗುಡಿ ರಸ್ತೆ ಸಮೀಪದ ಮನೆಗಳು ನೀರಿಗಾಗಿ ಸಂಕಟದ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿ ಭಾಗೇಶ ಕೊರೆ ಪ್ರಜಾವಾಣಿಗೆ ತಿಳಿಸಿದರು.

ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಹೊಲಗದ್ದೆಗಳ ಬಾವಿಗೆ ಸುತ್ತಾಡುವದು ಹೆಚ್ಚಿದೆ. ಬೈಕ್ , ಸೈಕಲ್, ಕ್ರೂಸರ್ ವಾಹನಗಳ ಮೂಲಕ ನೀರು ಹೊತ್ತು ತರುತ್ತಿದ್ದಾರೆ. ಖಾಸಗಿ ಬಾವಿಯಿಂದ ಪೂರೈಕೆ ಮಾಡುವ ನೀರಿಗಾಗಿ ದಿನವೀಡಿ ಜನರು ಕಾಯುತ್ತಿದ್ದಾರೆ. ಮನೆಗೆ ಆರೇಳು ಕೊಡ ಮಾತ್ರ ನೀರು ಲಭ್ಯವಾಗುತ್ತಿದೆ ಎಂದು ಕೇದಾರ ಬಿರಾದಾರ ತಿಳಿಸಿದರು.

ಗ್ರಾಮದ ಮುಖ್ಯಬೀದಿಗಳಲ್ಲಿ ಸಾಲು ಸಾಲು ಸರದಿಯಲ್ಲಿ ಖಾಲಿ ಕೊಡಗಳು ಇಟ್ಟು ನೀರಿಗಾಗಿ ಕಾಯುವದು ಸಾಮಾನ್ಯವಾಗಿದೆ. ಸಣ್ಣ ಟ್ಯಾಂಕ್‌ಗಳಿಗೆ ಪೈಪ್‌ಲೈನ್‌ ಅಳವಡಿಸಿ ನಲ್ಲಿ ಮೂಲಕ ನೀರು ಪೂರೈಕೆಯು ನಡೆದಿದೆ. ಮುಂಬರುವ ದಿನಗಳಲ್ಲಿ ಮಟಕಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.