ಚಿತ್ತಾಪುರ: ತಾಲ್ಲೂಕಿನ ಡೋಣಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೋಳಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಸಲವೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಜನರು ಸಮಸ್ಯೆಯೊಂದಿಗೆ ಹೊಂದಿಕೊಂಡು ಜೀವನ ಸಾಗಿಸುವ ಪರಿಸ್ಥಿತಿಯಿದೆ. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಡಳಿತ ನಿರ್ಲಕ್ಷಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದ ಹೊರವಲಯದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪುರಾತನ ದೊಡ್ಡ ಬಾವಿಯಲ್ಲಿ ಬೇಸಿಗೆಯ ಬಿಸಿಲಿನ ಪ್ರಖರತೆಗೆ ಮತ್ತು ಅಂತರ್ಜಲ ಮಟ್ಟವು ತೀವ್ರ ಕುಸಿತದಿಂದ ನೀರು ಪಾತಾಳಕ್ಕೆ ಸೇರಿದೆ. ಎರಡು ಕೊಳವೆ ಬಾವಿಗಳಿದ್ದು ಅಲ್ಪಮಟ್ಟಿಗೆ ಸಹಾಯಕವಾಗಿವೆ. ಒಂದು ಕೊಳವೆ ಬಾವಿಯಿಂದ ನೀರನ್ನು ತೆರೆದ ಬಾವಿಗೆ ಬಿಡಲಾಗುತ್ತಿದೆ. ವಿದ್ಯುತ್ ಕೈಕೊಟ್ಟರೆ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿಯಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಭೀಮಾಶಂಕರ.
ಎರಡು ಕೊಳವೆ ಬಾವಿಗಳ ನೀರು ಒಂದು ರೀತಿಯ ಕೆಟ್ಟ ವಾಸನೆ ಬರುತ್ತಿದೆ. ಜನರು ಅದೇ ನೀರು ಕುಡಿಯಬೇಕಿದೆ. ತೆರೆದ ಬಾವಿಯಲ್ಲಿನ ನೀರು ಕಡಿಮೆಯಾಗಿದೆ. ದಿನಾಲೂ ಜನರು ನೀರಿನ ವಾಸನೆ ಕುರಿತು ತಕರಾರು ಮಾಡುತ್ತಿದ್ದಾರೆ. ಗ್ರಾಮದ ಸಮೀಪವೇ ಶ್ರೀ ಸಿಮೆಂಟ್ ಕಂಪನಿ ಕಲ್ಲಿನ ಗಣಿಗಾರಿಕೆಯಿಂದ ಕೊಳವೆ ಬಾವಿ ಮತ್ತು ತೆರೆದ ಬಾವಿಗೆ ಗಣಿಯಲ್ಲಿನ ಮದ್ದು ಮಿಶ್ರಿತ ನೀರು ಕೊಳವೆ ಬಾವಿಗೆ ಬಂದು ನೀರು ಕಲುಷಿತಗೊಳ್ಳುತ್ತಿದೆ. ನೀರಿನಲ್ಲಿ ಮದ್ದಿನ ವಾಸನೆ ಬರುತ್ತಿದೆ. ನೀರು ಪರೀಕ್ಷಿಸಿದರೆ ಕುಡಿಯಲು ಯೋಗ್ಯವಿಲ್ಲ ಎನ್ನುವ ವರದಿ ಬಂದಿದೆ ಎಂದು ಗ್ರಾಮದ ಮಲ್ಲಿಕಾರ್ಜುನ ತಳವಾರ ಹೇಳುತ್ತಾರೆ.
ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಗಾರ ಹಳೆಯದಾಗಿದ್ದರಿಂದ ಪಕ್ಕದ ಮನೆಗಳ ಜನರಿಗೆ ಆತಂಕ ಉಂಟಾಗಿ ನೀರು ತುಂಬಬೇಡಿ ಎಂದು ಹೇಳಿದ್ದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೊಳವೆ ಬಾವಿಗಳಿದ್ದು ನೀರು ಪೂರೈಕೆಗೆ ನೆರವಾಗಿವೆ. ಗ್ರಾಮದ ಕೆಲವು ಕಡೆಗೆ ಸಮರ್ಪಕವಾಗಿ ಪೈಪುಗಳನ್ನು ಅಳವಡಿಸಿಲ್ಲ. ಹೀಗಾಗಿ ನೀರು ಪೂರೈಕೆಗೆ ಸಮಸ್ಯೆಯಾಗಿ ಜನರು ಕೊಡ ಹಿಡಿದುಕೊಂಡು ಬೇರೆಡೆ ನೀರಿಗಾಗಿ ಅಲೆದಾಡುವ ಸ್ಥಿತಿಯಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇಟಗಾ ಗ್ರಾಮದಲ್ಲಿ ಐದು ತೆರೆದ ಬಾವಿಗಳಿವೆ. ಎರಡು ಕೊಳವೆ ಬಾವಿಗಳಿವೆ. ಗ್ರಾಮದ ಪಕ್ಕದಲ್ಲಿಯೇ ಓರಿಯೆಂಟ್ ಸಿಮೆಂಟ್ ಕಂಪನಿಯ ಕಲ್ಲು ತೆಗೆಯುವ ಗಣಿಗಾರಿಕೆಯಿಂದಾಗಿ ತೆರೆದ ಬಾವಿಗಳು ನೀರಿಲ್ಲದಂತೆ ಬತ್ತಿವೆ. ಕೊಳವೆ ಬಾವಿಗಳಿಂದ ಮಾತ್ರ ಗ್ರಾಮಕ್ಕೆ ನೀರು ಪೂರೈಸುವ ವ್ಯವಸ್ಥೆಯಿದೆ. ವಿದ್ಯುತ್ ಸಮಸ್ಯೆಯಾದರೆ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿಯಿದೆ ಎನ್ನುತ್ತಾರೆ ಗ್ರಾಮದ ರವಿ ಮುಡಬೂಳಕರ್.
ಗ್ರಾಮೀಣ ಕುಡಿಯುವ ನೀರು ಮತ್ತು ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಯು ಮೇ ತಿಂಗಳ ಅಂತ್ಯದವರೆಗೆ ಒಟ್ಟು 10 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗಬಹುದೆಂದು ಗುರುತಿಸಿದೆ. ತಾಲ್ಲೂಕಿನಲ್ಲಿ ಒಟ್ಟು 61 ಕೊಳವೆ ಬಾವಿಗಳಿದ್ದು, 36 ಕೊಳವೆ ಬಾವಿಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಜನರಿಗೆ ಕುಡಿಯುವ ನೀರಿನ ಆಸರೆಯಾಗಿವೆ. 21 ಕೊಳವೆ ಬಾವಿಗಳು ನಿರುಪಯುಕ್ತವಾಗಿವೆ. ನೀರಿನ ಸಮಸ್ಯೆಯಾದ ನೀರಿನ ವ್ಯವಸ್ಥೆ ಮಾಡಲು 32 ಕೊಳವೆ ಬಾವಿಗಳನ್ನು ಆಡಳಿತವು ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ.
‘ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ’ ‘ತಾಲ್ಲೂಕು ವ್ಯಾಪ್ತಿಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಎಚ್ಚರಿಕೆ ವಹಿಸಲಾಗಿದೆ. ಹಲಕರ್ಟಿ ಗ್ರಾಮದಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ’ ಎಂದು ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು. ‘ಇವಣಿ ಗ್ರಾಮದಲ್ಲಿ ಕೊಳವೆ ಬಾವಿಯಿಂದ ಮೇಲ್ಮಟ್ಟದ ಜಲಸಂಗ್ರಹಗಾರಕ್ಕೆ ಪೈಪುಗಳ ಅಳವಡಿಕೆ ನಡೆಯುತ್ತಿದೆ. ಜನರಿಗೆ ನೀರಿನ ಸಮಸ್ಯೆಯಾಗದಂತೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ವಿವಿಧ ಗ್ರಾಮಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿದರೆ ಹೆಚ್ಚಿನ ಸಮಸ್ಯೆಯಾಗಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.